ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್ ಅಬ್ಬರಿಸಿ, ಬೊಬ್ಬಿರಿಸುತ್ತಿದ್ದಾರೆ.
ನಿನ್ನೆ ಯಂಗ್ ಗನ್ ಶುಭುನ್ಮನ್ ಗಿಲ್ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಾಕ್ ಬೌಲರ್ಗಳನ್ನು ಬೆಂಡೆತ್ತಿದ್ದರೆ, ಇಂದು ಇನ್ನಿಂಗ್ಸ್ ಆರಂಭಿಸಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ದಂಡಿಸುತ್ತಿದ್ದಾರೆ.
55 ಎಸೆತಗಳಲ್ಲಿ ಐದು ಬೌಂಡಿರಿ ನೆರವಿನೊಂದಿಗೆ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 66ನೇ ಅರ್ಧಶತಕ. ಟೆಸ್ಟ್ನಲ್ಲಿ 29 ಅರ್ಧಶತಕ, ಟಿ-20ಯಲ್ಲಿ 37 ಹಾಗೂ ಐಪಿಎಲ್ನಲ್ಲಿ 50 ಅರ್ಧಶತಕ ಸಿಡಿಸಿದ್ದಾರೆ.
12 ಬಾರಿ 1,000+ ರನ್
ವಿರಾಟ್ ಕೊಹ್ಲಿ ಈ ವರ್ಷದ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 1,000 ರನ್ ಪೂರೈಸಿ ದಾಖಲೆ ಸೃಷ್ಟಿಸಿದರು. ಈ ಮೂಲಕ ಕ್ರಿಯಾಶೀಲ ಆಟಗಾರರ ಪೈಕಿ 1 ವರ್ಷದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಕಳೆದ 15 ವರ್ಷಗಳಲ್ಲಿ ವಿರಾಟ್ ಕೊಹ್ಲಿ ವರ್ಷದಲ್ಲಿ 1,000+ ರನ್ ಗಳಿಸಿದ್ದು ಇದು 12ನೇ ಬಾರಿಯಾಗಿದೆ. ಇನ್ನೂ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (16) ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ 1,000+ ರನ್ ಗಳಿಸಿದ್ದಾರೆ. ಕೊಹ್ಲಿ ಸಚಿನ್ ದಾಖಲೆ ಉಡೀಸ್ ಮಾಡುವ ಸೂಚನೆ ನೀಡಿದ್ದಾರೆ.