ಮಂಡ್ಯ : ರಾಜ್ಯ ರಾಜಕಾರಣಕ್ಕೆ ರಾಜವಂಶಸ್ಥರು ಪ್ರವೇಶ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾವೇರಿ ವಿಚಾರದಲ್ಲಿ ನಾಡಿನ ರೈತರ ಜೊತೆ ನಾವು ಇದ್ದೇವೆ. ಸದಾ ರಾಜ್ಯದ ಜೊತೆ ಇರುತ್ತೇವೆ. ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ‘ರಾಜಕೀಯದಲ್ಲಿ ನಮ್ಮ ಪಾತ್ರ ಏನು ಇಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ. ಅದರ ಜೊತೆಗೆ ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮೂಲಕ ಮಾಡುವ ಅವಶ್ಯಕತೆ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು, ಅದನ್ನು ಮಾಡಲು ನಾವು ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಅಧಿಕಾರದಲ್ಲಿ ಇರುವವರನ್ನು ಪ್ರಶ್ನೆ ಮಾಡಿ
ಕೆಆರ್ಎಸ್(KRS) ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಟ್ಟ ವಿಚಾರದ ಬಗ್ಗೆ ಮಾತನಾಡಿ, ‘ಇತಿಹಾಸ ನೋಡಿ, ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದ್ದಾರೋ ನೋಡಬೇಕು. ಅದರ ಜೊತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸರ್ಕಾರ ತಿರ್ಮಾನ ಮಾಡಬೇಕು. ಸಂಪೂರ್ಣವಾಗಿ ರಾಜ್ಯ ಹಾಗೂ ರೈತರ ಜೊತೆ ನಮ್ಮ ಬೆಂಬಲ ಇದೆ. ಈ ಬಗ್ಗೆ ಅಧಿಕಾರದಲ್ಲಿರುವವರನ್ನು ನೀವು ಪ್ರಶ್ನೆ ಮಾಡಿ’ ಎಂದು ಹೇಳಿದ್ದಾರೆ.