ಕಲಬುರಗಿ : ಸನಾತನ ಧರ್ಮ ನಿರ್ಮೂಲಮನೆ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸುವ ಮೂಲಕ ನಟ ಪ್ರಕಾಶ್ ರಾಜ್ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ರಾಜಕಾರಣಿಗಳು ಏನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಉದಯನಿಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು, ಅವರು ಮಾತನಾಡಿರುವುದರಲ್ಲಿ ತಪ್ಪೇನಿದೆ. ಅಸ್ಪೃಶ್ಯತೆ ಹೋಗಬೇಕು ಎನ್ನುವ ನಿಟ್ಟಿನಲ್ಲಿ ಅವರು ಮಾತನಾಡಿದ್ದಾರೆ. ಆದರೆ, ಕೆಲವರು ಅವರ ಹೇಳಿಕೆಯನ್ನು ತಿರುಚಿ ಇಲ್ಲಸಲ್ಲದ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಜಾತಿಗಳ ನಡುವೆ ವಿವಾದ ಹುಟ್ಟು ಹಾಕೋರಿಗೆ ಬೇರೆ ಕೆಲಸವಿಲ್ಲದ ಕಾರಣ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಹೆಣ್ಣು ಮಕ್ಕಳಿಗೆ ಹಾನಿ
ಕೋಮು ಗಲಭೆಯಿಂದ ಹಾನಿಯಾಗುತ್ತಿರುವುದು ಹೆಣ್ಣು ಮಕ್ಕಳಿಗೆ. ಅದರಿಂದ ನಾವೇ ಸಮಸ್ಯೆ ಅನುಭವಿಸಬೇಕಿದೆ. ಅವರು ವಿಶ್ವಗುರು ಆಗಲಿ, ನಾವು ವಿಶ್ವ ಮಾನವ ಆಗೋಣ ಎಂದು ನಟ ಪ್ರಕಾಶ್ ರಾಜ್ ಸನಾತನ ಕುರಿತು ಮಾತನಾಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಗೆಗೆ ಸನಾತನ ಧರ್ಮ ಹೋಲಿಕೆ
ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ, ನವಿಲು ಸಹ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಈ ಮೂಲಕ ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸಲು ತರುತ್ತಿದ್ದಾರೆ ಎನ್ನುವ ಮೂಲಕ ಸನಾತನ ಧರ್ಮದವರನ್ನು ಪ್ರಕಾಶ್ ರಾಜ್ ಕಾಗೆಗಳಿಗೆ ಹೋಲಿಕೆ ಮಾಡಿದ್ದಾರೆ.