ಶಿವಮೊಗ್ಗ : ನಿನ್ನೆ ಬಿ.ಕೆ ಹರಿಪ್ರಸಾದ್ ಅವರು ಒಂದು ಸಭೆ ಮಾಡಿದ್ದಾರೆ. ಸಮಾಜವಾದ, ಪಂಚೆ, ಕಾರು ಅಂತೆಲ್ಲ ಹೇಳಿದ್ದಾರೆ. ಹಿಂದುತ್ವವಾದಿ, ದಡ್ಡ ಅಂದ್ರೆ ಸಿ.ಟಿ ರವಿ ಅಂತಾರೆ. ಆದರೆ, ಹರಿಪ್ರಸಾದ್ ಪಂಚೆ ಹೇಳಿದ್ದು ಯಾರಿಗೆ ಅಂತ ಗೊತ್ತಾಗಿಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಕುಟುಕಿದರು.
ಶಿವಮೊಗ್ಗದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆ ವಾಚ್ ಯಾರಿಗೆ ಸೇರಿದ್ದು? ಸಮಾಜವಾದ ಹಿನ್ನೆಲೆಯಿಂದ ಬಂದವರು ಯಾರು? ಅಂಥವರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದು ಭೂಕಂಪನದ ಮುನ್ಸೂಚನೆ ಅಂತ ಕಾಣಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಒಳಗೆಯೇ ಭೂಕಂಪನದ ಕೇಂದ್ರಗಳಿವೆ ಅನ್ನುವ ಮುನ್ಸೂಚನೆ ಅವರು ತೋರಿಸಿದ್ದಾರೆ ಎಂದು ಕಾಂಗ್ರೆಸ್ ಒಳಗೆ ಭುಗಿಲೆದ್ದಿರುವ ಅಸಮಾಧಾನದ ಬಗ್ಗೆ ಲೇವಡಿ ಮಾಡಿದರು.
ಸಿಂಗಲ್ ಫೇಸ್ ಕರೆಂಟೂ ಬರ್ತಿಲ್ಲ
ಐದು ವರ್ಷ ಒಳ್ಳೆಯ ಆಡಳಿತ ನೀಡುವ ಜವಾಬ್ದಾರಿ ಅವರಿಗೆ ಇದೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ನೂರಾರು ತಪ್ಪು ಮಾಡಿದ್ದಾರೆ. ವಿದ್ಯುತ್ ಬಿಲ್ ಏರಿಸಿದ್ರು, ಮುದ್ರಾಂಕ ಶುಲ್ಕ ಏರಿಸಿದ್ರು. ಬಸ್ ದರ ಏರಿಸಿದ್ರು, ಎಣ್ಣೆ ದರವೂ ಏರಿಸಿದ್ರು, ಅಬಕಾರಿ ಶುಲ್ಕ ಏರಿಸಿದ್ರು. ಸಿಂಗಲ್ ಫೇಸ್ ಕರೆಂಟೂ ಬರ್ತಿಲ್ಲ. ಇನ್ನು ಸ್ವಲ್ಪ ದಿನ ಹೋದ್ರೆ, ಕರೆಂಟ್ ಕೂಡ ಇಲ್ಲ ಫ್ರೀ ಎಂದು ವಾಗ್ದಾಳಿ ನಡೆಸಿದರು.