ಬೆಂಗಳುರು : ಆಂಧ್ರಪ್ರದೇಶ ರಾಜ್ಯ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಗರಣದಲ್ಲಿ ಅರೆಸ್ಟ್ ಆಗಿರುವ ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೋರ್ಟ್ ಆದೇಶಿಸಿದೆ.
ನಿನ್ನೆಯಷ್ಟೇ ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್ ಪೊಲೀಸರು ಬಂಧಿಸಿದ್ದರು. ನಂದ್ಯಾಲ್‌ನಲ್ಲಿ ಶಿಬಿರವೊಂದರಲ್ಲಿದ್ದ ನಾಯ್ಡು ಅವರನ್ನು ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲು ಪೊಲೀಸರು ಬಂದಿದ್ದರು. ಈ ಸಮಯದಲ್ಲಿ ಮಾಜಿ ಸಿಎಂ ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಚಂದ್ರಬಾಬು ನಾಯ್ಡು ಬಂಧನಕ್ಕೆ ಟಿಡಿಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದು, ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ಅರೆಸ್ಟ್ ಮಾಡಿದ್ದರು. ಇಂದು ಎಸಿಬಿ ನ್ಯಾಯಾಲಯದ ಮುಂದೆ ಅವರನ್ನು ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಆದೇಶ ನೀಡಿದೆ.