ಮಂಗಳೂರು : ಮಿನಿ ಲಾರಿ , ಕಾರು ಮತ್ತು ಬಸ್ಸಿನ ನಡುವೆ ಸರಣಿ ಅಪಘಾತ ನಡೆದಿದ್ದು, ಕಾರಲ್ಲಿ ಸಿಲುಕಿದ್ದ ಚಾಲಕನ ಹೊರತೆಗೆದ ಸ್ಥಳೀಯರು ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಜಪ್ಪಿನ ಮೊಗರು ಎಂಬಲ್ಲಿ ನಡೆದಿದೆ.
ಜಪ್ಪಿನ ಮೊಗರುವಿನ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ, ಮಿನಿ ಲಾರಿಯೊಂದು ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಲಾರಿ ಹಿಂದೆ ಚಲಿಸುತ್ತಿದ್ದ ಕಾರನ್ನು ಚಾಲಕನು ಹಠತ್ತನೆ ಬ್ರೇಕ್ ಹೊಡೆದು ನಿಲ್ಲಿಸಿದ್ದನು. ಅದೇ ವೇಳೆ ಈ ಕಾರಿಗೆ ಹಿಂದಿನಿಂದ ವೇಗವಾಗಿ ಧಾವಿಸುತ್ತಿದ್ದ, ಕೇರಳ ಸರಕಾರಿ ಬಸ್ವೊಂದು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಲಾರಿಗೆ ಅಪ್ಪಳಿಸಿ ಅಪ್ಪಚ್ಚಿಯಾಗಿದೆ.
ಇದನ್ನು ಓದಿ : ಕಾಂಗ್ರೆಸ್ ಅಪ್ರಸ್ತುತ ಪಕ್ಷ : ಅಶ್ವತ್ಥನಾರಾಯಣ
ಈ ದುರ್ಘಟನೆ ನಡೆದ ಬಳಿಕ ಕಾರಲ್ಲಿ ತಲಪಾಡಿ ನಿವಾಸಿಯಾದ ಮಂಗಳೂರಿನ ಎಮ್ ಸಿಎಫ್ ಉದ್ಯೋಗಿ ಚಾಲಕ ದಿನೇಶ್ ಎಂಬುವರು ಸಿಲುಕಿದ್ದು, ಆತನನ್ನು ಸ್ಥಳೀಯರು ಮತ್ತು ವಾಹನ ಸವಾರರು ಹರಸಾಹಸ ಪಟ್ಟು ಚಾಲಕನನ್ನು ಹೊರತೆಗೆದರು.
ಬಳಿಕ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು. ಕಾರಿನಲ್ಲಿ ಚಾಲಕನೊಬ್ಬನೇ ಇದ್ದು, ಹಿಂದಿನ ಸೀಟಲ್ಲಿ ಪ್ರಯಾಣಿಕರು ಇದ್ದಿದ್ದರೇ ಮರಣ ಹೋಮವೇ ನಡೆಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಸದ್ಯ ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯೊಂದರ ಸಿಸಿಟಿವಿಯಲ್ಲಿ ಘಟನೆಯ ವೀಡಿಯೋ ಸೆರೆಯಾಗಿದೆ.