ತುಮಕೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಯಡಿಯೂರಪ್ಪ ಅವರು ಅಧಿಕೃತ ಮಾಹಿತಿ ನೀಡಿರುವ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ವಿಪಕ್ಷ ನಾಯಕರ ಆಯ್ಕೆ ಮಾಡಿಲು ಅವರಿಂದ ಸಾಧ್ಯ ಆಗಿಲ್ಲ. ಇದು ನಾಲಾಯಕತನ. ಅವರ ಆಂತರಿಕ ಕಚ್ಚಾಟದಿಂದ ವಿಪಕ್ಷ ನಾಯಕ ಆಯ್ಕೆ ಮಾಡಿಕೊಂಡಿಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿಯವರು ಆತಂಕದಲ್ಲಿ ಇದ್ದಾರೆ. ಕಾಂಗ್ರೆಸ್ ಜನಪ್ರಿಯತೆ ಇದೆ, ಹಾಗಾಗಿ ಅವರಿಗೆ ಆತಂಕದ ಇದೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಆಡಳಿತದಿಂದ ಜನರ ಜೀವನ ದುಸ್ತರ ಆಗಿದೆ. ಉದ್ಯೋಗ ಕೊಡ್ತಿನಿ ಅಂದು ಕೋಟ್ಯಂತರ ಉದ್ಯೋಗ ಕಿತ್ತುಕೊಂಡಿದ್ದಾರೆ. ಶ್ರೀಮಂತರ ಬಿಜೆಪಿ ವಿರುದ್ಧ ದುಡಿಯುವ ಜನ ದಂಗೆ ಎದ್ದಿದ್ದಾರೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ
ಇಂದು ತುಮಕೂರು ಜಿಲ್ಲೆಗೆ ಬಂದಿದ್ದೇನೆ. ನಾಡಕಚೇರಿ, ತಾಲ್ಲೂಕು ಕಚೇರಿ ಸಬ್ ರಿಜಿಸ್ಟಾರ್ ಕಚೇರಿ ಪರಿಶೀಲಿಸಿದ್ದೇನೆ. ಜನರ ಸಮಸ್ಯೆ ಆಲಿಸಿದ್ದೇನೆ. ಅಧಿಕಾರಿಗಳ ಕೆಲಸ ಪರಿಶೀಲಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಯಿದೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.