ತುಮಕೂರು : ಹಿಂದೂ ಧರ್ಮದ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಆ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ‘ವಿವಾದಾತ್ಮಕ ಹೇಳಿಕೆ ನೀಡಿಲ್ಲ. ನಾನು ಧರ್ಮಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮದ ಬಗ್ಗೆ ಹೇಳಿದ್ದೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ’ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ನಮಗಿರುವಷ್ಟು ಅಭಿಮಾನ ಬಿಜೆಪಿ ನಾಯಕರಿಗಿಲ್ಲ. ಕೇವಲ ತೋರಿಕೆ, ಪ್ರಚಾರಕ್ಕಾಗಿ ಮಾತ್ರ ಹಿಂದೂ ಎನ್ನುತ್ತಾರೆ. ನಮ್ಮ ಹೇಳಿಕೆಯಲ್ಲಿ ಯಾವುದೇ ವಿವಾದವಿಲ್ಲ, ತಪ್ಪು ಹೇಳಿಕೆ ನೀಡಿಲ್ಲ. ರಾಜಕೀಯ ಕಾರಣಕ್ಕೆ ವಿರೋಧಿಸಿದರೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
ಟೈಮ್ ಬರಲಿ, ಉತ್ತರ ಕೊಡ್ತೇನೆ
ನನ್ನ ಪ್ರಕಾರ, ನಾನು ನೀಡಿರುವ ಹೇಳಿಕೆಯಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ಅವರು ರಾಜಕೀಯ ಕಾರಣಕ್ಕೆ ವಿವಾದ ಮಾಡಿದರೆ ಸಂದರ್ಭ ಬಂದಾಗ ಉತ್ತರ ಕೊಡ್ತೇನೆ. ನನಗಿಂತ ಹೆಚ್ಚೇನೂ ಬಿಜೆಪಿಯವರು ಆಚರಣೆ ಮಾಡುವುದಿಲ್ಲ. ನಾನು ಕೇವಲ ಹೋಲಿಕೆ ಮಾಡಿ ಮಾತನಾಡಿದ್ದೇನೆ ಅಷ್ಟೇ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಾನು ಏನು ತಪ್ಪು ಹೇಳಿದ್ದೇನೆ?
ನಾನು ಏನು ತಪ್ಪು ಹೇಳಿದ್ದೇನೆ. ವಿವಾದ ಮಾಡಿದವರು ಯಾರು? ಶಿಕ್ಷಕರ ದಿನಾಚಾರಣೆಯಲ್ಲಿ ಧರ್ಮಗಳ ಹೋಲಿಕೆ ಮಾಡುವಾಗ ಹೇಳಿದ್ದು. ಏನು ಪದ ಉಪಯೋಗಿಸಿದ್ದೇನೆ ಗಮನಿಸಬೇಕು. ಎಲ್ಲಾ ಧರ್ಮಗಳ ಸಾರಾಂಶ ಒಂದೇ. ಹಿಂದೂ ಧರ್ಮದ ಶಾಂತಿಯ ಮಂತ್ರ ಅದಕ್ಕೆ ಅಡಿಪಾಯ ಹಾಕಿದೆ ಅಂತ ಹೇಳಿದ್ದು ತಪ್ಪಾಗುತ್ತಾ? ಯಾರು, ಯಾವ ರೀತಿ ವಿಶ್ಲೇಷಣೆ ಮಾಡ್ತಾರೆ ಅವರು ಉತ್ತರ ಕೊಡಲಿ. ಅವರ ಮನಸಿಗೆ ಏನು ಅನ್ಸುತ್ತೆ ಅದನ್ನು ಹೇಳಲಿ. ಯಾವ ತಪ್ಪು ಅರ್ಥದಲ್ಲಿ ಹೇಳಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.