ಗದಗ : ರಿಪಬ್ಲಿಕ್ ಆಫ್ ಭಾರತ್ ಮರುನಾಮಕರಣ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹೇಳಿದರು.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣ ಕುರಿತು ಗದಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿನ ಗ್ರಾಮ, ಪಟ್ಟಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಗುಲಾಮಗಿರಿ ಹೆಸರು ಇದ್ದವು. 2014ರ ನಂತರ ಗುಲಾಮರಿ ಹೆಸರನ್ನು ತೆಗೆಯಲಾಗುತ್ತಿದೆ. ಭಾರತೀಯ ಹೆಸರು, ಹಿಂದೂ ಧರ್ಮದ ಹೆಸರುಗಳನ್ನು ಇಡಲಾಗುತ್ತಿದೆ ಎಂದರು.
ನಮ್ಮ ಸಂಸ್ಕೃತಿ, ಸಂಪ್ರದಾಯದ ಹೆಸರನ್ನು ಇಡಲಾಗುತ್ತಿದೆ. ಜಿ-20 ಸಮ್ಮೇಳನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಅಂತ ಹೆಸರು ಇಡುತ್ತಿರುವುದು ಸ್ವಾಗತ. ಇಂಡಿಯಾ (I.N.D.I.A) ಎಂಬ ಶಬ್ದದಲ್ಲೂ ಗುಲಾಮಗಿರಿ ಇದೆ. ಬ್ರಿಟಿಷರು ಇಂಡಿಯಾ ಅಂತ ಹೆಸರು ಇಟ್ಟಿದ್ದರು. ಭಾರತ ಎನ್ನುವುದು ಹೆಮ್ಮೆಯ ಶಬ್ದವಾಗಿದೆ. ಭಾರತ ಎಂಬುದು ಸ್ವಾಭಿಮಾನದ ಅರ್ಥ ಬರುವ ಶಬ್ದವಾಗಿದೆ. ರಿಪಬ್ಲಿಕ್ ಆಫ್ ಭಾರತ ನಾಮಕರಣವನ್ನು ಶ್ರೀರಾಮ ಸೇನೆ ಸಂಘಟನೆಯಿಂದ ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು.