Thursday, December 19, 2024

ಡ್ರಗ್ಸ್ ರಾಕೆಟ್ ವಿರುದ್ಧ ಹೋರಾಡಿದ ಕುಲದೀಪ್​ ಜೈನ್​ಗೆ ಎತ್ತಂಗಡಿ ಶಿಕ್ಷೆ

ಮಂಗಳೂರು : ಅಧಿಕಾರ ಸ್ವೀಕರಿಸಿ 5 ತಿಂಗಳಲ್ಲೇ ಮಂಗಳೂರು ಪೊಲೀಸ್​​ ಕಮಿಷನರ್​​​ ಕುಲದೀಪ್​ ಜೈನ್​ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮಂಗಳೂರು ಕಮಿಷನರ್ ಆಗಿ ಡ್ರಗ್ಸ್ ರಾಕೆಟ್ ವಿರುದ್ಧ ಸಮರವನ್ನೇ ಸಾರಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ಹುದ್ದೆಯನ್ನೇ ತೋರಿಸದೆ ಎತ್ತಂಗಡಿ ಮಾಡಲಾಗಿದೆ.

ಡ್ರಗ್ಸ್ ಫ್ರೀ ಮಂಗಳೂರು ಅನ್ನುವ ದಿಟ್ಟ ಗುರಿಯಿಟ್ಟುಕೊಂಡು ಕಳೆದ ಮೂರು ತಿಂಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ್ದ ಕುಲದೀಪ್ ಜೈನ್, 100ಕ್ಕೂ ಹೆಚ್ಚು ದಂಧೆಕೋರರನ್ನು ಬಂಧಿಸಿದ್ದರು. ಅಷ್ಟೇ ಅಲ್ಲ, ಡ್ರಗ್ಸ್ ಪೂರೈಕೆ ಜಾಲವನ್ನೇ ಜಾಲಾಡಿ, ಬೆಂಗಳೂರಿನಿಂದ ಪೂರೈಸುತ್ತಿದ್ದ ನೈಜೀರಿಯಾ ಮೂಲದ ಮಹಿಳಾ ಡಾನ್​ಗಳನ್ನೇ ಸೆರೆಹಿಡಿದಿದ್ದರು.

ಅದಾಗಿ ವಾರ ಕಳೆಯುವಷ್ಟರಲ್ಲಿ ಕಮಿಷನರ್ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅನುಪಮ್ ನೂತನ ಆಯುಕ್ತ

ಇನ್ನು ನೂತನ ಆಯುಕ್ತರಾಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ. ಇವರು 2008-ಬ್ಯಾಚ್ IPS ಅಧಿಕಾರಿಯಾಗಿದ್ದು ಮೂಲತಃ ರಾಜಸ್ಥಾನದ ಜೋಧ್‌ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿ, ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸರ್ಕಾರವೇ ಡ್ರಗ್ ಮಾಫಿಯಾ ನಡೆಸುತ್ತಿದೆಯೇ?

ಪವರ್ ಟಿವಿ ವರದಿ ಮಾಡಿರುವ ಸುದ್ದಿಯನ್ನು ರೀ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದೆ. ದಕ್ಷ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ದೊರೆತಿದೆ ಎತ್ತಂಗಡಿ ಭಾಗ್ಯ! ಎಂದು ಕುಟುಕಿದೆ.

ಡ್ರಗ್ ಮಾಫಿಯಾವನ್ನು ರಾಜ್ಯದಲ್ಲಿ ಸಮರ್ಥವಾಗಿ ಹತ್ತಿಕ್ಕುತ್ತಿದ್ದ ದಕ್ಷ ಅಧಿಕಾರಿ ಕುಲದೀಪ್ ಜೈನ್‌ರನ್ನು ಸಕಾರಣವಿಲ್ಲದೇ, ಹುದ್ದೆಯನ್ನು ತೋರಿಸದೇ ವರ್ಗಾವಣೆ ಮಾಡಲಾಗಿದೆ. ಡ್ರಗ್ ಮಾಫಿಯಾದವರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿಯಿತೇ ಅಥವಾ ಡ್ರಗ್ ಮಾಫಿಯಾವನ್ನು ರಾಜ್ಯ ಸರ್ಕಾರವೇ ನಡೆಸುತ್ತಿದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.

RELATED ARTICLES

Related Articles

TRENDING ARTICLES