ರಾಮನಗರ : ರಾಮನಗರದಲ್ಲಿ ಯೂರ್ನಿವರ್ಸಿಟಿ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಹಾದಿಲಿ, ಬೀದಿಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ ಎಂದು ಕುಟುಕಿದರು.
ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಅಂತ ಇದೆ. ಅದನ್ನು ಕನಕಪುರದಲ್ಲಾದ್ರೂ ಮಾಡ್ತೀವಿ, ರಾಮನಗರದಲ್ಲಾದ್ರೂ ಮಾಡ್ತೀವಿ. ಮೆಡಿಕಲ್ ಕಾಲೇಜಿಗೆ ರಾಮನಗರದಲ್ಲೂ ಟೆಂಡರ್ ಆಗಿದೆ, ಕನಕಪುರದಲ್ಲೂ ಟೆಂಡರ್ ಆಗಿದೆ ಎಂದು ಅಡ್ಡಗೋಡೆಮೇಲೆ ದೀಪ ಇಟ್ಟಂತೆ ಉತ್ತರ ನೀಡಿದರು.
ಫಸ್ಟ್ ರಾಮನಗರಕ್ಕೆ, ನೆಕ್ಸ್ಟ್ ಕನಕಪುರ
ನನ್ನ ಆದ್ಯತೆ ಮೊದಲು ರಾಮನಗರಕ್ಕೆ, ನಂತರ ಕನಕಪುರಕ್ಕೆ. ರಾಜಕೀಯಕ್ಕೆ ಬಂದ್ ಮಾಡುತ್ತಿದ್ದಾರೆ. ಬಂದ್ ಮಾಡುವವರನ್ನು ಬೇಡ ಎನ್ನಲು ಆಗುತ್ತಾ? ರಾಮನಗರದಲ್ಲಿ ಈಗಾಗಲೇ ದೊಡ್ಡ ಆಸ್ಪತ್ರೆ ಇದೆ. ರಾಮನಗರ, ಕನಕಪುರ ಎರಡೂ ಕಡೆ ರಾಜೀವ್ ಗಾಂಧಿ ವಿವಿಯ ಕಟ್ಟಡ ಇರಲಿದೆ. ಅವರಿಗೆ ಸಿಗಬೇಕಾದುದ್ದು ಅವರಿಗೆ ಸಿಗುತ್ತೆ, ನಮಗೆ ಸಿಗಬೇಕಾದುದ್ದು ನಮಗೆ ಸಿಗುತ್ತದೆ ಎಂದು ತಿಳಿಸಿದರು.
ಅಲ್ಲೂ, ಇಲ್ಲೂ ಕಾಲೇಜು ಮಾಡ್ಬೇಕು
ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಎಸ್ಟಿಮೇಟ್, ಟೆಂಡರ್ ಆಗಿ ಎಲ್ಲಾ ಕೆಲಸ ಮುಗಿದಿತ್ತು. ಈಗ ಎರಡೂ ಕಡೆಗೂ ಮೆಡಿಕಲ್ ಕಾಲೇಜು ಅವಶ್ಯಕತೆ ಇದೆ. ಕನಕಪುರದಲ್ಲಿ ನಿರ್ಮಾಣ ಆಗುತ್ತಿರುವ ಕಾಲೇಜು ರಾಮನಗರಕ್ಕೆ ಸಮೀಪವೇ ಇದೆ. ಅಲ್ಲೂ ಕಾಲೇಜು ಮಾಡಬೇಕು, ಇಲ್ಲೂ ಕಾಲೇಜು ಮಾಡಬೇಕು ಎಂದರು.