ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಬ್ಲಾಸ್ಟ್ ಆಗುವುದು ಖಚಿತ ಹಾಗೂ ನಿಶ್ಚಿತ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಈ ಕುರಿತು ಟ್ವಿಟ್ ಮಾಡಿರುವ ಬಿಜೆಪಿ, ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್‌ಗೆ, ಸದಾ ಬೇರೆಯವರದ್ದೇ ಚಿಂತೆ ಜಾಸ್ತಿ ಎಂದಿದೆ. ಅಲ್ಲದೆ, ಕಾಂಗ್ರೆಸ್ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್ ಪಟ್ಟಿ ಮಾಡಿದೆ.
ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಏಕಪಕ್ಷೀಯ ನಡೆಗಳಿಗೆ ಬೇಸತ್ತು, ಬೆಂಗಳೂರು ಕೈ ಶಾಸಕರು, ಡಿಕೆಶಿ ಸಿಟಿ ರೌಂಡ್ಸ್‌ಗೆ ಚಕ್ಕರ್ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ತಮಗೆ ಮಂತ್ರಿಗಿರಿ ತಪ್ಪಿಸಿದರು ಎಂಬ ಕಾರಣಕ್ಕೆ, ಡಿಕೆಶಿ ಅವರ ಸಂಪೂರ್ಣ ಸಹಕಾರದೊಂದಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ ಕುರ್ಚಿಗೆ ಟೈಂ ಬಾಂಬ್ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ
ಕಲ್ಬುರ್ಗಿಯಲ್ಲಿ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಕಲ್ಬುರ್ಗಿ ಜಿಲ್ಲೆಯ ಉಳಿದ ಕೈ ಶಾಸಕರಿಗೆ ಹಿಡಿಸಿಲ್ಲ. ಬಿ.ಆರ್. ಪಾಟೀಲ್ ಸರ್ಕಾರದ ವಿರುದ್ಧವೇ ಪತ್ರ ಬರೆದರೆ, ಅಜಯ್ ಸಿಂಗ್ ಪಕ್ಷದ ಚಟುವಟಿಕೆಗಳಿಂದ ದೂರ ದೂರ. ರಾಯಚೂರಿನಲ್ಲಿ ಶಾಸಕರೇ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ನೀಡಲಾಗಿದೆ. ರಾಯಚೂರು ಕೈ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಅನುದಾನದ ಆಸೆ ತೋರಿಸಿ, ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ ಎಂದು ಟೀಕಿಸಿದೆ.
ಬಂಗಾರಪ್ಪರಿಗೇಕೆ ಮಂತ್ರಿಗಿರಿ?
ಧಾರವಾಡದಲ್ಲಿ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಡಿ.ಕೆ. ಶಿವಕುಮಾರ್ ಬಣದ ವಿನಯ್ ಕುಲಕರ್ಣಿ ಹಾಗೂ ಪರಮೇಶ್ವರ್ ಬಣದ ಪ್ರಸಾದ್ ಅಬ್ಬಯ್ಯ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪರಿಗೇಕೆ ಮಂತ್ರಿಗಿರಿ? ಅಂತ ಸಿದ್ದರಾಮಯ್ಯ ಬಣದ ಭದ್ರಾವತಿಯ ಸಂಗಮೇಶ್ ಗುರ್ ಎನ್ನುತ್ತಿದ್ದಾರೆ.
ಸರ್ಕಾರದ ಭ್ರಷ್ಟಾಚಾರ ಬಯಲು
ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ರಾಜೀನಾಮೆ ಬಿಸಾಡಿ ಹೊರಹೋಗುವ ಮಾತನಾಡಿದ್ದಾರೆ. ಕೊಪ್ಪಳದಲ್ಲಿ ಶಿವರಾಜ್ ತಂಗಡಗಿರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಶಾಸಕ ಬಸವರಾಜ ರಾಯರೆಡ್ದಿ, ಸರ್ಕಾರದ ಭ್ರಷ್ಟಾಚಾರವನ್ನು ಹೋದಲ್ಲಿ ಬಂದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ ಎಂದು ಛೇಡಿಸಿದೆ.
ಬೆಳಗಾವಿಯಲ್ಲಿ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿಯವರಿಗೂ ಹಾಗೂ ಡಿ.ಕೆ. ಶಿವಕುಮಾರ್ ಬಣದ ಲಕ್ಷ್ಮಿ ಹೆಬ್ಬಾಳ್ಕರ್‌ಗೂ ಹುಸಿ ಮುನಿಸು, ಕಾಂಗ್ರೆಸ್ಸಿಗೆ ಬೆಳಗಾವಿ ಸೂತ್ರ ಹರಿದ ಗಾಳಿಪಟವಾಗಿದೆ ಎಂದು ವ್ಯಂಗ್ಯವಾಡಿದೆ.