ಬೆಂಗಳೂರು : ಬಿಬಿಎಂಪಿ ಗುತ್ತಿಗೆದಾರರಿಗೆ ಶೇಕಡ 50% ಬಾಕಿ ಬಿಲ್ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಕೆಲಸದ ಬಾಕಿ ಬಿಲ್ ಹಣದಲ್ಲಿ 50% ಹಣ ಬಿಡುಗಡೆ ಮಾಡುತ್ತೇವೆ. ತನಿಖೆ ಬಳಿಕ ಪೂರ್ಣ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇದೇ ಸೆಪ್ಟೆಂಬರ್ 7ಕ್ಕೆ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಪೂರೈಸಲಿದೆ. ಭಾರತ್ ಜೊಡೋ ಯಾತ್ರೆ ನೆನಪಲ್ಲಿ ಪಾದಯಾತ್ರೆ ಮಾಡಲಿದ್ದೇವೆ. ಸಿಎಂ ಸಿದ್ದರಾಮಯ್ಯ ರಾಮನಗರ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದಾರೆ. ಅಂದು ಕ್ಯಾಬಿನೆಟ್ ಸಭೆ ಇರಲಿದೆ. ಕ್ಯಾಬಿನೆಟ್ ಸಭೆ ಬಳಿಕ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡಲ್ಲ
ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಹಿನ್ನೆಲೆ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು. ಹಾಗಾಗಿ, ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುವುದಿಲ್ಲ. ಉಳಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯಲಿದೆ. ಒಂದು ಗಂಟೆಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.