ಹಾಸನ : ‘ಪಡುವಲ ಹಿಟ್ಟೆ ಬಳಿ ತೆಂಗು, ಅಡಿಕೆ, ಸಪೋಟ, ಮಾವಿನ ತೋಟವು ಇದೆ. ಎಲ್ಲವನ್ನು ಚೆಕ್ ಮೇಲೆ ತೆಗೆದುಕೊಂಡಿರೋದು. ನನ್ನದೆಲ್ಲ ಚೆಕ್ ವ್ಯವಹಾರನೇ..’ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿರುವ ಅವರು, ನಮ್ಮ ಜೀವನದಲ್ಲಿ ನಾವು ಯಾವ ಆಸ್ತಿಯನ್ನು ಮುಚ್ಚಿಟ್ಟಿಲ್ಲ. ಐಟಿ ರಿಪೋರ್ಟ್ ಅನ್ನು ನಾನು ಕೊಡ್ತೀನಿ.. ನನ್ನ ಹೆಂಡತಿನೂ ಕೊಡ್ತಾರೆ. ಪ್ರತಿ ಹಂತ ಹಂತದಲ್ಲೂ ಇನ್ಕಮ್ ಟ್ಯಾಕ್ಸ್ ಗೆ ಮಾಹಿತಿ ಕೊಡ್ತಾ ಇದ್ದೇನೆ ಎಂದರು.
ನಮ್ಮ ಕುಟುಂಬ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡೇ ಬಂದಿರೋದು. ಎರಡೂ ರಾಷ್ಟ್ರೀಯ ಪಕ್ಷಗಳೂ ಸೇರಿ ಈ ಪಕ್ಷ ಮುಗಿಸೋದಕ್ಕೆ ಹೊರಟಿದ್ರು, ಏನು ಮಾಡೋಕಾಗುತ್ತೆ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಎಲ್ಲವೂ ಆದ್ರಪ್ಪ. ನನಗೆ ಕೋರ್ಟ್ ನೋಟಿಸ್ ಕೊಟ್ರೆ ನಮ್ಮ ವಕೀಲರ ಮೂಲಕ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ನಾನ್ಯಾಕೆ ಅದರ ಬಗ್ಗೆ ಹೇಳಲಿ
ಪುತ್ರ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸುಪ್ರೀಂಕೋರ್ಟ್ ನಲ್ಲಿ ತಡೆ ಸಿಗುವ ವಿಶ್ವಾಸವಿದೆಯೇ ಎಂಬ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚಿತವಾಗಿ ನಾನ್ಯಾಕೆ ಅದರ ಬಗ್ಗೆ ಹೇಳಲಿ. ಪ್ರಜ್ವಲ್ ಸುಪ್ರೀಂಕೋರ್ಟ್ ಗೆ ಹಾಕ್ತಾರೋ ಏನ್ ಮಾಡ್ತಾರೋ, ಅವರಿಗೆ ಬಿಟ್ಟಿದ್ದು. ಅವರ ಕೇಸ್ ಅದು. ಅವರ ಕೇಸ್‌ನಲ್ಲಿ ಏನಾಗುತ್ತೋ ನಾನು ಏನ್ ಹೇಳಲಿ ಎಂದರು.
ಪ್ರಜ್ವಲ್ಗೆ ಏನು ವಯಸ್ಸು ಇಲ್ವಾ?
ಕೆಲವರು ಭವಿಷ್ಯ ನುಡಿಯೋರು ಇದ್ದಾರೆ, ಅದನ್ನ ನಾನ್ಯಾಕೆ ಹೇಳಲಿ. ಕಾನೂನು ಏನಿದೆ ಅದನ್ನು ಪ್ರಜ್ವಲ್‌ಅವರು ಮಾಡಿಕೊಳ್ತಾರೆ. ಪ್ರಜ್ವಲ್ ಅವರಿಗೆ ಏನು ವಯಸ್ಸು ಇಲ್ವಾ? ಅವರು ಏನ್ ಮಾಡಿದ್ದಾರೆ, ಎಂತು ಮಾಡಿದ್ದಾರೆ ಗೊತ್ತಿಲ್ಲ ನನಗೆ. ಅದನ್ನೆಲ್ಲ ತಿಳ್ಕೊಂಡು ಎಲ್ಲಾ ಆದ್ಮೇಲೆ ಸವಿಸ್ತಾರವಾಗಿ ಹೇಳುತ್ತೇನೆ ಎಂದು ಹೆಚ್.ಡಿ ರೇವಣ್ಣ ಹೇಳಿದರು.