ಚಂದ್ರಯಾನ-3 ಮಿಷನ್ ನ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ತಾತ್ಕಾಲಿಕವಾಗಿ ಪೂರ್ಣಗೊಳಿಸಿದ್ದು ಸದ್ಯ ರೋವರನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ರೋವರ್ ಪೇ ಲೋಡ್‌ಗಳಾದ APXS ಮತ್ತು LIBS ಎರಡನ್ನೂ ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಮೂಲಕ ಭೂಮಿಯ ಮೇಲೆ ಪೇಲೋಡ್‌ನ ಎಲ್ಲಾ ಡೇಟಾವನ್ನು ಸ್ವೀಕರಿಸಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಚಂದ್ರನ ಮೇಲೆ ಸೂರ್ಯಾಸ್ತದ ನಂತರ ರೋವರ್ನ್ನು ಸ್ಲೀಪ್ ಮೋಡ್‌ಗೆ ಕಳುಹಿಸಲಾಗಿದೆ. ಆದರೆ, ಪ್ರಗ್ಯಾನ್ ರೋವರ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ ಎಂದು ಇಸ್ರೋ ತಿಳಿಸಿದೆ. ಸೆಪ್ಟೆಂಬರ್ 22ರಂದು ಚಂದ್ರನು ಉದಯಿಸಿದಾಗ ಸೂರ್ಯನ ಬೆಳಕು ಅದರ ಸೌರ ಫಲಕಗಳ ಮೇಲೆ ಬೀಳುವ ರೀತಿಯಲ್ಲಿ ಇದನ್ನು ನಿಲ್ಲಿಸಲಾಗಿದ್ದು ರಿಸೀವರ್ ಆನ್ ಆಗಿದೆ. ಇದು ಸೆಪ್ಟೆಂಬರ್ 22ರಂದು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ರೋವರ್ ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ 14 ದಿನಗಳ ಕಾಲ ಸೌರಶಕ್ತಿಯಿಂದ ವಿದ್ಯುತ್ ಪಡೆಯುವುದನ್ನು ಮುಂದುವರೆಸಿದೆ. ಆದರೆ, ಈಗ ಚಂದ್ರನ ಮೇಲೆ ರಾತ್ರಿಯಾದಾಗ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದು ಸ್ಲೀಪ್ ಮೋಡ್ನಲ್ಲಿರುತ್ತದೆ. ಆದರೆ, ಅಲ್ಲಿನ ತೀವ್ರ ಚಳಿಯಿಂದಾಗಿ ಸೆಪ್ಟೆಂಬರ್ 22ರವರೆಗೆ ಅವರ ಉಪಕರಣ ಸುರಕ್ಷಿತವಾಗಿದ್ದರೆ ಮತ್ತೆ ಸೌರಶಕ್ತಿಯಿಂದ ಕೆಲಸ ಆರಂಭಿಸಬಹುದು ಎಂದು ಇಸ್ರೋ ಭರವಸೆ ವ್ಯಕ್ತಪಡಿಸಿದೆ.