ರಾಮನಗರ : ಲೋಕಸಭಾ ಚುನಾವಣೆ ನಂತರ ಬಿಜೆಪಿಗೆ ಇನ್ನು ಕೆಲಸ ಇರಲ್ಲ ಎಂದು ಬಿಜೆಪಿ ನಾಯಕರಿಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಡವರಿಗೆ ಮುಟ್ಟುವ ಯೋಜನೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಬಂದ ನಂತರ ಬಿಜೆಪಿಯವರಿಗೆ ಕೆಲಸ ಕಡಿಮೆ ಆಗಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಕೆಲಸ ಕಡಿಮೆ ಆಗಲಿದೆ ಎಂದು ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ, ಮೈಸೂರು, ರಾಮನಗರಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಮಾತನಾಡುವುದು ಒಂದೇ ಬಿಜೆಪಿ ಚಟ. ಈ ಹಿಂದೆ ಮೋದಿಯವರೂ ಬಂದು ಬಹಳಷ್ಟು ಸುಳ್ಳು ಹೇಳಿ ಹೋಗಿದ್ದಾರೆ. ನಮ್ಮದು ಹಂಗಿಲ್ಲ, ನುಡಿದರೆ ನಡಿತೀವಿ ಎಂದು ಛೇಡಿಸಿದರು.
ಅವ್ರು ನಮಗೂ ಮೋಸ ಮಾಡಿದ್ರು
40 ಕಾಂಗ್ರೆಸ್ ಶಾಸಕರು ಬಿ.ಎಲ್. ಸಂತೋಷ್ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ಆಪರೇಷನ್ ಮಾಡೋದೇ ಬಿಜೆಪಿ ಕೆಲಸ. ಯಾವ ವರ್ಷ 113 ಸೀಟು ಬಂದು ಸರ್ಕಾರ ಮಾಡಿರುವ ಉದಾಹರಣೆ ಇದೆ ಹೇಳಿ. ಬಿಜೆಪಿಯವರು ನಮಗೂ ಮೋಸ ಮಾಡಿದ್ರು. ಬಿಜೆಪಿಯವರಿಗೆ ಹೇಳಿ ಮಾಡಿರುವಂತಹ ತಾಳ್ಮೆಇಲ್ಲ. ಹೇಳಿದಂತೆ ಯಾವತ್ತೂ ಮಾಡಿಲ್ಲ. ಬಿ.ಎಲ್ ಸಂತೋಷ್ 40 ಮಂದಿ ಅಂತಿದ್ದಾರಲ್ಲ, 4 ಮಂದಿಗಾದ್ರೂ ಕರೆಸಿಕೊಳ್ಳಲಿ ಎಂದು ಸವಾಲ್ ಹಾಕಿದರು.
ಕೆಲವು ಯೋಜನೆಗೆ ಅನುದಾನ ಕಡಿಮೆ
ಗ್ಯಾರಂಟಿ ಯೋಜನೆಯಿಂದಾಗಿ ವಿವಿಧ ಇಲಾಖೆಗೆ ಅನುದಾನ ಕೊರತೆ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ನಮ್ಮಲ್ಲಿ ಅನುದಾನ ಕೊರತೆ ಅನ್ನೋ ಪ್ರಶ್ನೆ ಇಲ್ಲ. ಗ್ಯಾರಂಟಿ ಯೋಜನೆ ಜನರಿಗೆ ಕೊಟ್ಟ ಚುನಾವಣಾ ಪೂರ್ವ ಭರವಸೆ. 5 ಗ್ಯಾರಂಟಿಗಳಲ್ಲಿ 4 ಅನುಷ್ಠಾನಕ್ಕೆ ಬಂದಿದೆ. ಕೆಲವೊಂದಿಷ್ಟು ಯೋಜನೆಗೆ ಅನುದಾನ ಕಡಿಮೆ ಆದರೂ ಪರವಾಗಿಲ್ಲ ಎಂದು ಹೇಳಿದರು.