ಬೆಂಗಳೂರು : ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದೇ ಬಿಜೆಪಿ. ಬಿಎಸ್ವೈ ವಿರುದ್ಧ ಪಿತೂರಿ ನಡೆಸಿದ್ದೇ ಪಕ್ಷದವರು. ಲೋಕಾಯುಕ್ತಕ್ಕೂ ದೂರು ಕೊಟ್ಟರು, ಯಡಿಯೂರಪ್ಪ ನಿರಪರಾಧಿ ಎಂದು ಸ್ವಪಕ್ಷದ ವಿರುದ್ಧವೇ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗುಡುಗಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರ ಬಣ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ. ಪಕ್ಷದ ಕಚೇರಿಯಿಂದ ಯಾರೋ ಕರೆ ಮಾಡಿ ಮೀಟಿಂಗ್ಗೆ ಕರೆಯುತ್ತಾರೆ. ಬೇಷರತ್ತಾಗಿ ನೋಟಿಸ್ ವಾಪಸ್ ಪಡೆಯಲಿ ಎಂದು ಆಕ್ರೋಶಗೊಂಡರು.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳುತ್ತೇನೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಕೆಲಸ ಆಗ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ಕೊಟ್ಟರು. ತಮ್ಮದೇ ಬಣ ಸೃಷ್ಟಿಸಿಕೊಂಡು ಸಿಎಂ ಆಗುವ ಯತ್ನ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಬಿ.ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.
ಇವ್ರ ಪ್ರಣಾಳಿಕೆಯಿಂದಲೇ ಸೋಲು
ಕೆಲಸಕ್ಕೆ ಬಾರದವರು ಬಿಜೆಪಿ ಕಚೇರಿ ನಡೆಸುತ್ತಿದ್ದಾರೆ. ಇಂತಹವರಿಂದಲೇ ವಾಜಪೇಯಿ ಅವರು ಪ್ರಧಾನಿ ಆಗುವುದು ತಪ್ಪಿತು. ಲಿಂಗಾಯತರ ವಿರೋಧ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್, ಕೆಎಸ್. ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿದ್ದೇ ಇವ್ರು. ಹಿಂದೆ ಪಕ್ಷ ಕಟ್ಟಲು ದಿ. ಅನಂತಕುಮಾರ್ ಮಾತ್ರ ಸಾಥ್ ಕೊಟ್ಟಿದ್ದು. ಇವರ ಪ್ರಣಾಳಿಕೆಯಿಂದಲೇ ಪಕ್ಷಕ್ಕೆ ಸೋಲಾಗಿದೆ. ಈಗ ಆತ್ಮಾವಲೋಕನದ ಅಗತ್ಯ ಇಲ್ಲ. ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.