ಬೆಂಗಳೂರು : ಹಾವೇರಿ ಪಟಾಕಿ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಪಟಾಕಿ ಇಟ್ಟಿದ್ದ ಕಟ್ಟಡದ ಬಳಿ ವೆಲ್ಡಿಂಗ್ ಕಾರ್ಯ ನಡೆಯುತ್ತಿದ್ದು ಎಂಬ ಮಾಹಿತಿ ಸಿಕ್ಕಿದೆ.
ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿಯೇ ಬೆಂಕಿ ಕಿಡಿ ತಗುಲಿ ಪಟಾಕಿ ಅವಘಡ ಸಂಭವಿಸಿರೋ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆಯೂ ಚುರುಕುಗೊಂಡಿದೆ. ತನಿಖೆ ನಂತ್ರವಷ್ಟೇ ದುರಂತಕ್ಕೆ ಅಸಲಿ ಕಾರಣವೇನು ಅನ್ನೋದು ಗೊತ್ತಾಗಲಿದೆ.
ಹಾವೇರಿಯ ಆಲದಕಟ್ಟಿಯಲ್ಲಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು.
– ಮುಖ್ಯಮಂತ್ರಿ @siddaramaiah— CM of Karnataka (@CMofKarnataka) August 29, 2023
ನಾಲ್ವರ ದೇಹ ಸುಟ್ಟು ಕರಕಲು
1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ(45), ರಮೇಶ್ ಬಾರ್ಕಿ(28), ಶಿವಲಿಂಗ ಅಕ್ಕಿ(28) ಮತ್ತು ಜಯಣ್ಣ(45) ಎಂದು ಗುರ್ತಿಸಲಾಗಿದೆ. ನಾಲ್ವರ ದೇಹಗಳು ಸುಟ್ಟು ಕರಕಲಾಗಿವೆ.
ಗೋದಾಮಿನ ಸಮೀಪದ ಮನೆಯ ನಿವಾಸಿ ಕಲಾವತಿ, ವಾಸಿಂ ಶಫೀ ಅಹ್ಮದ್, ಶೇರು ಮಾಳಪ್ಪ ಕಟ್ಟಿಮನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.