ಬೆಂಗಳೂರು : ಕೇವಲ ಸಣ್ಣಪುಟ್ಟ ಅಲ್ಲ.. ದೊಡ್ಡ ದೊಡ್ಡ ಬಿಜೆಪಿ ನಾಯಕರೇ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಲವಾರು ಮಂದಿ ಬಿಜೆಪಿ ನಾಯಕರು ನನ್ನ ಜೊತೆಗೂ, ಸತೀಶ್ ಜಾರಕಿಹೊಳಿ ಜೊತೆಗೂ ಸಂಪರ್ಕದಲ್ಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಹಸ್ತ ನಾವು ಮಾಡ್ತಾ ಇಲ್ಲ. ಆಪರೇಷನ್ ಕಮಲ ವಿರೋಧಿಸಿದವರು ನಾವು. ಅವರಾಗಿಯೇ ಬರ್ತೀವಿ ಅಂದ್ರೆ ಬೇಡ ಅನ್ನೋಕಾಗತ್ತಾ? ನಮ್ಮವರನ್ನು ಡಿಸ್ಟರ್ಬ್ ಮಾಡದೆಯೇ ನಾವು ಪಕ್ಷ ಸೇರ್ಪಡೆ ಮಾಡಿಕೊಳ್ತೇವೆ. ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂದು ಸಚಿವ ಎಂ.ಬಿ ಪಾಟೀಲ್ ಆಫರ್ ನೀಡಿದ್ದಾರೆ.
5,000 ಕ್ಯುಸೆಕ್ ನೀರು ಬಿಡಲ್ಲ!
ಕಾವೇರಿ ನೀರು ವಿಚಾರ ಕುರಿತು ಮಾತನಾಡಿ, ಹಿಂದೆ 10 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ರು. ಈಗ 5 ಸಾವಿರ ಹೇಳಿದ್ದಾರೆ. ನಾವು ಕಾವೇರಿ ನೀರು ಪ್ರಾಧಿಕಾರ ಮುಂದೆ ಬಲವಾಗಿ ವಾದ ಮಾಡ್ತೇವೆ. ವೈಜ್ಞಾನಿಕವಾಗಿ ಅಲ್ಲ, ವಸ್ತುನಿಷ್ಟವೂ ಅಲ್ಲ. ನಮ್ಮ ಡ್ಯಾಂಗಳಲ್ಲಿಯೇ ನೀರಿಲ್ಲ, ನಮಗಿಂತ ಉತ್ತಮ ಸ್ಥಿತಿಯಲ್ಲಿ ತಮಿಳುನಾಡು ಇದೆ. ಹೀಗಾಗಿ, 5,000 ಕ್ಯುಸೆಕ್ ನೀರು ಬಿಡುವಂತದ್ದು ಆಗಬಾರದು ಎಂದು ಹೇಳಿದ್ದಾರೆ.
ಆದೇಶ ರದ್ದುಗೊಳಿಸುವಂತೆ ಆಗ್ರಹ
ಕಾವೇರಿ ಮ್ಯಾನೇಜ್ಮೆಂಟ್ ಅಥಾರಿಟಿಯಿಂದ ಅತಿ ಶೀಘ್ರದಲ್ಲಿ ಸಂಕಷ್ಟ ಸೂತ್ರ ಆಗಬೇಕು. ವೈಜ್ಞಾನಿಕ ವಸ್ತುನಿಷ್ಟವಾಗಿರುವಂತ ಸಂಕಷ್ಟ ಸೂತ್ರ ರಚನೆ ಆಗಬೇಕು. ಎರಡೂ ರಾಜ್ಯಗಳ ತಜ್ಞರನ್ನು ಭಾಗಿ ಮಾಡಿಕೊಳ್ಳಬೇಕು. ಹಿಂದೆಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟ ಸೂತ್ರವನ್ನು ಅತಿ ಬೇಗನೇ ಮಾಡಬೇಕು. ಈ ಆದೇಶವನ್ನು ರದ್ದು ಮಾಡಬೇಕು ಅಂತ ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.