ವಿಜಯಪುರ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಅಮಿತ್ ಶಾ ದೂರವಾಣಿ ಕರೆ ಮಾಡಿರುವ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆಲವೊಂದು ರಾಜಕಾರಣಿಗಳು ತಮ್ಮ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳಲು ಮಾಧ್ಯಮಗಳಿಗೆ ಹರಿಬಿಡ್ತಾರೆ. ಅವ್ರಿಗೆ ಯಾರು ಕರೆ ಮಾಡಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ನಾನು ಸುಮ್ಮನೆ ಹೇಳಿಕೊಳ್ತೇನೆ, ನಿನ್ನೆ ರಾತ್ರಿ 12 ಗಂಟೆಗೆ ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿದ್ರು. ನಿನ್ನೆ ರಾತ್ರಿ ಪ್ರಧಾನಿ ಜೊತೆಗೆ ಯತ್ನಾಳ್ ಮಾತುಕತೆ ಅಂತ ಮಾಧ್ಯಮಗಳಲ್ಲಿ ಎರಡು ದಿನ ಬರುತ್ತೆ. ಹೀಗೆ ಅಶೋಕ್ ನಿಂದ ಹೇಳಿಸ್ತಿನಿ. ಜಗದೀಶ್ ಶೆಟ್ಟರ್ಗೆ ಯಾಕೆ ಫೋನ್ ಮಾಡ್ತಾರೆ? ಕರೆ ಮಾಡುವ ಪ್ರಶ್ನೆಯೇ ಬರಲ್ಲ. ಶೆಟ್ಟರ್ ಬಳಿ ನಮ್ಮ ಕೆಲ್ಸ ಏನಿದೆ? ಎಂದು ಕುಟುಕಿದ್ದಾರೆ.
ಇದೆಲ್ಲಾ ಕಾಂಗ್ರೆಸ್ ಸೃಷ್ಟಿ
ಕಾಂಗ್ರೆಸ್ ಆಪರೇಶನ್ ಹಸ್ತ, ಮಾಜಿ ಶಾಸಕರನ್ನು ಸೆಳೆಯುತ್ತಿರುವ ವಿಚಾರವಾಗಿ ಮಾತನಾಡಿ, ಬಿಜೆಪಿ ಬಿಟ್ಟು ಹೋಗ್ತಾರೆ ಅನ್ನೋದು ಕಾಂಗ್ರೆಸ್ ಸೃಷ್ಟಿ. ಬಿಜೆಪಿಯಲ್ಲಿ ಎಂಎಲ್ಎ, ಮಂತ್ರಿಗಳಾಗಿ ಸಾಕಷ್ಟು ಎಲ್ಲ ಅನುಭವಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾಜಿ ಶಾಸಕರಿಗೆ ಕಿವಿ ಮಾತು ಹೇಳ್ತೀನಿ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.