ಮಂಡ್ಯ : ಜೆಡಿಎಸ್ ಮುಗಿದಿಲ್ಲ, ಬದುಕಿದೆ. ದುರಹಂಕಾರದ ಮಾತು ಬಿಟ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂದು ನಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿದ್ದೇವೆ. ಜನ ನಮನ್ನು ಕೈಬಿಟ್ಟಿಲ್ಲ ಎಂದು ಹೇಳಿದರು.
ಮಂಡ್ಯ ಜಿಲ್ಲೆ ರಾಜಕಾರಣ ವಿಭಿನ್ನ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿಎಂ ಆಗ್ತಾರೆ ಅಂತ 8 ಸ್ಥಾನ ಗೆಲ್ಲಿಸಿದ್ರು. ಎಸ್.ಎಂ ಕೃಷ್ಣ ಸಿಎಂ ಆಗ್ತಾರೆ ಅಂತ ಅವರಿಗೂ 8 ಸ್ಥಾನ ಗೆಲ್ಲಿಸಿದ್ರು. ಅದು ಜಿಲ್ಲೆಯ ಜನರ ಸ್ವಾಭಿಮಾನ, ಅಭಿಮಾನ ಎಂದು ಕುಮಾರಸ್ವಾಮಿ ತಿಳಿಸಿದರು.
ನನ್ಗೆ 15 ಕೋಟಿ ಕೊಡಲು ಬಂದಿದ್ರು
ನಿಮ್ಮ ಕಾಲದಲ್ಲಿ ವರ್ಗಾವಣೆ ಆಗಿಲ್ವಾ ಅಂತಾರೆ. ಈಗಿನ ವರ್ಗಾವಣೆಗೂ, ನನ್ನ ಕಾಲದ ವರ್ಗಾವಣೆಗೂ ವ್ಯತ್ಯಾಸ ಇದೆ. 2018ರಲ್ಲಿ ನಾನು ಸಿಎಂ ಆದಾಗಾ.. ಬಿಡಿಎ ಕಮಿಷನರ್ ಆಗಲು 15 ಕೋಟಿ ಕೊಡಲು ಬಂದರು. ನನಗೆ 15 ಕೋಟಿ ಕೊಡುವ ಅಧಿಕಾರಿ ಬಿಡಿಎಗೆ ಏನು ಕೆಲಸ ಮಾಡಲು ಸಾಧ್ಯ ಬೇಡ ಎಂದಿದ್ದೆ. ನನ್ನ ಸರ್ಕಾರದ ತೆಗೆದು ಬಿಜೆಪಿ ಬಂದ ಬಳಿಕ ಅದೇ ಅಧಿಕಾರಿಗೆ ಪೋಸ್ಟ್ ಕೊಟ್ರು ಎಂದು ಬಿಜೆಪಿ ಕಡೆ ಬೊಟ್ಟು ಮಾಡಿದರು.
ನಾನು ಯಾವುದಕ್ಕೂ ಅಂಜಲ್ಲ
ಇವತ್ತು ಯಾವುದಕ್ಕೂ ನಾನು ಅಂಜಲ್ಲ. ಇದಕ್ಕಿಂತ ಕಷ್ಟದ ದಿನಗಳನ್ನು ನೋಡಿದ್ದೇನೆ. ಮೊದಲು ರೈತರ ಕಷ್ಟಗಳನ್ನು ಪರಿಹರಿಸಿ. 134 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದಿದ್ದೀರಿ. ರೈತರಿಗೆ ಬರ ಪರಿಹಾರ ಸಿಗಲ್ಲ. ಬರದ ಹೆಸರಲ್ಲೂ ದುಡ್ಡು ಹೊಡೆಯುವ ಕಾರ್ಯಕ್ರಮ ಆರಂಭಾಗುತ್ತದೆ. ಅದು ಆಗದ ರೀತಿ ಎಚ್ಚರಿಕೆ ವಹಿಸಿ ಕೆಲಸ ಮಾಡಿ ಎಂದು ನಯವಾಗಿಯೇ ಚಾಟಿ ಬೀಸಿದರು.