ಬೆಂಗಳೂರು : ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಹಲವು ಬಾರಿ ಶಂಕುಸ್ಥಾಪನೆ ಆಗಿದ್ರೂ, ಆರೋಗ್ಯ ವಿವಿ ನಿರ್ಮಾಣ ಕಾರ್ಯಕ್ಕೆ ಮುಹೂರ್ತ ಕೂಡ ಬರುತ್ತಿಲ್ಲ. ಇದೀಗ ಕಾಮಗಾರಿ ಆರಂಭವಾಗುವ ಹಂತದಲ್ಲೇ ಮತ್ತೊಂದು ಗೊಂದಲ ಸೃಷ್ಠಿಯಾಗಿದೆ.
ಡಿಸಿಎಂ ಡಿಕೆಶಿ ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಶಿಫ್ಟ್ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಒಂದೂವರೆ ದಶಕದಿಂದ ನೆನೆಗುದಿಗೆ ಬಿದ್ದಿದೆ. ಕಳೆದ ಸರ್ಕಾರದಲ್ಲಿ 600 ಕೋಟಿ ವೆಚ್ಚದಲ್ಲಿ ವಿವಿ ನಿರ್ಮಿಸಲು ಆಡಳಿತಾತ್ಮಕ ಅನುಮೊದನೆ ದೊರೆತಿತ್ತು. ಬಳಿಕ ಅಂದಿನ ಸಿಎಂ ಬೊಮ್ಮಾಯಿ ಗುದ್ದಲಿಪೂಜೆ ನೆರವೇರಿಸಿದ್ದರು. ಆದ್ರೀಗ, ನಿರ್ಮಾಣ ಹಂತದ ಸಮಯದಲ್ಲೇ ಮತ್ತೊಂದು ಗೊಂದಲ ಸೃಷ್ಟಿಯಾಗಿದೆ.
ನಾನೇ 100 ಕೋಟಿ ಹಣ ಕೊಟ್ಟಿದ್ದೆ
ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಮನಗರದಿಂದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡೋದು ಬೇಡ. ಮೈತ್ರಿ ಸರ್ಕಾರ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ಹಣ ಕೊಟ್ಟಿದ್ದೆ. ಆ ಬಳಿಕ ಬಿಜೆಪಿ ಸರ್ಕಾರ ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯ್ತು. ಈಗ ನಿಮ್ಮದೇ ಸರ್ಕಾರ ಇದೆ. ನಾನು ಕೊಟ್ಟಿದ್ದ ಆ ಮೆಡಿಕಲ್ ಕಾಲೇಜಿಗೆ ಜೀವಕೊಡಿ. ಆದರೆ, ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ ಎಂದು ಆಗ್ರಹಿಸಿದ್ದಾರೆ.
ಡಿಸಿಎಂ ನಡೆಗೆ ಆಕ್ರೋಶ
ಸದ್ಯ ಮೆಡಿಕಲ್ ಕಾಲೇಜು ಸ್ಥಳಾಂತರದಿಂದ ಗೊಂದಲ ಸೃಷ್ಟಿಯಾಗಿದೆ. ಶತಾಯ ಗತಾಯ ಕನಕಪುರಕ್ಕೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಡಿಸಿಎಂ ನಡೆಗೆ ರಾಮನಗರ ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಿಡಿದಿರೋ ಗ್ರಹಣ ಬಿಡುವ ಲಕ್ಷಣಗಳು ಕಾಣ್ತಿಲ್ಲ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವಿಘ್ನಗಳ ಮೇಲೆ ವಿಘ್ನ ಎದುರಾಗ್ತಿದೆ. ಈಗಾಗಲೇ ಮೆಡಿಕಲ್ ಕಾಲೇಜು ರಾಮನಗರದಲ್ಲೇ ಇರಬೇಕು ಎನ್ನುವ ಹೋರಾಟ ಆರಂಭವಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.