ಬೆಂಗಳೂರು : ಎಲ್ಲಿ ಹೋದ್ರು ನೀರು ಸಮುದ್ರ ಸೇರಬೇಕು, ಆ ಸಮುದ್ರನೇ ಕಾಂಗ್ರೆಸ್ ಪಕ್ಷ ಎಂದು ವಲಸಿಗ ಶಾಸಕರಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಬಸ್ ರೈಡ್ ತರ, ಹತ್ತಿದ ಮೇಲೆ ಕೊನೆಯ ತನಕ ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಇರೋದೆ ಒಂದು ಸೌಭಾಗ್ಯ. ಪಕ್ಷದಲ್ಲಿ ಇದ್ದರೆ ಹಿರಿತನವೂ ಇರುತ್ತದೆ, ಅಧಿಕಾರವೂ ಸಿಗುತ್ತದೆ. ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮ, ಜಾತಿ ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎನ್ನುವ ಮೂಲಕ ಕಾಂಗ್ರೆಸ್ ಬಿಟ್ಟು ಹೋಗಿ ಮತ್ತೆ ಬರುತ್ತಿರುವವರಿಗೆ ಪರೋಕ್ಷವಾಗಿಯೇ ಕುಟುಕಿದ್ದಾರೆ.
ಅರ್ಹತೆ ನೋಡಿ ಅಧಿಕಾರ ಕೊಡ್ತಿವಿ
ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ 5 ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಬಹಳ ಮುಖ್ಯ. ಯಾವುದೇ ಹುದ್ದೆ ಆಕಾಂಕ್ಷೆ ಇಲ್ಲದೆ ಆಯನೂರು ಮಂಜುನಾಥ್ ನಮ್ಮ ಪಕ್ಷ ಸೇರುತ್ತಿದ್ದಾರೆ. ವ್ಯಕ್ತಿ, ಅರ್ಹತೆ ನೋಡಿ ಅಧಿಕಾರ ಕೊಡ್ತಿವಿ, ಹಿರಿಯರ ಜೊತೆ ಹೊಸಬರು ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಯಾರಿಗೂ ಟಿಕೆಟ್ ಕನ್ಪರ್ಮೇಶನ್ ಇಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಸರ್ವೆ ಮಾಡಿಸ್ತೇವೆ, ಆಗ ಟಿಕೆಟ್ ನಿರ್ಧರಿಸ್ತೇವೆ. ಪಕ್ಷದ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಅಷ್ಟೇ ಎಂದು ಡಿ.ಕೆ ಶಿವಕುಮಾರ್ ಖಡಕ್ ಸೂಚನೆ ರವಾನಿಸಿದ್ದಾರೆ.