ತಾಯಿಯ ಗರ್ಭದಲ್ಲಿನ ಮಗು 9 ತಿಂಗಳು ಗರ್ಭದಲ್ಲಿ ಸುರಕ್ಷಿತವಾಗಿರುವಂತೆ, ವಿಕ್ರಮ್ ಲ್ಯಾಂಡರ್ ನ ಗರ್ಭದಲ್ಲಿ 41 ದಿನಗಳ ಕಾಲ ಸುರಕ್ಷಿತವಾಗಿದ್ದ ರೋವರ್, ಸಾಪ್ಟ್ ಲ್ಯಾಂಡಿಂಗ್ ಆದ 3 ರಿಂದ 4 ಗಂಟೆಗಳ ನಂತರದಲ್ಲಿ ಲ್ಯಾಂಡರ್ ನಿಂದ ಹೊರಬರುತ್ತದೆ. ಇದರ ಒಟ್ಟು ತೂಕ ಕೇವಲ 26 kg ಮಾತ್ರ.ಪ್ರಗ್ಯಾನ್ ಎಂದರೆ ಬುದ್ದಿವಂತಿಕೆ, ರೋವರಿಂಗ್ ಎಂದರೆ ತಿರುಗಾಟ ಎಂದು ಅರ್ಥ.
ಲ್ಯಾಂಡರ್ ನಿಂದ ಹೊರಬಂದ ರೋವರ್ ತನ್ನಲ್ಲಿನ ಆ್ಯಂಟೆನಾದ ಮೂಲಕ ಲ್ಯಾಂಡರ್ ಜೊತೆಯಲ್ಲಿ ಸಂಪರ್ಕವನ್ನಿಟ್ಟುಕೊಂಡು, ಲ್ಯಾಂಡರ್ ಲ್ಯಾಂಡ್ ಆದ ಜಾಗದಿಂದ ಅಂದಾಜು 500 ಮೀಟರ್ ಸುತ್ತಲಿನ ನೆಲದಲ್ಲಿ ತನ್ನಲ್ಲಿ ಅಳವಡಿಸಿದ 6 ಚಕ್ರಗಳ ಸಹಾಯದಿಂದ ಚಲಿಸುತ್ತಾ, ಚಂದ್ರನಲ್ಲಿನ ಮಣ್ಣು, ತೇವಾಂಶ (ನೀರಿನ ಲಭ್ಯತೆ) ಮತ್ತು ಖನಿಜಗಳ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ.
ರೋವರ್ ನಲ್ಲಿ ಯಾವುದೇ ಇಂಧನ (Propellant) ಇರುವುದಿಲ್ಲ. ಇದು ಲ್ಯಾಂಡರ್ ನಿಂದ ಹೊರ ಬಂದಾಗ, ಚಂದ್ರನ ದಕ್ಷಿಣ ಧ್ರುವದಲ್ಲಿ ಬೀಳುತ್ತೀರುವ ಸೂರ್ಯನ ಓರೆಕಿರಣಗಳ ಮಂದ ಬೆಳಕನ್ನು ತನ್ನಲ್ಲಿ ಅಳವಡಿಸಿದ ಶಕ್ತಿಶಾಲಿ ಸೌರಫಲಕದಿಂದ ಸೌರಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈ ಸೌರಶಕ್ತಿಯ ಸಹಾಯದಿಂದ ಭೂಮಿಯ 14 ದಿನಗಳ/ ಚಂದ್ರನ 1 ಹಗಲಿನ ಸಮಯದವರೆಗೆ (ಭೂಮಿಯ 14 ದಿನಗಳು ಚಂದ್ರನ 1 ಹಗಲಿಗೆ ಸಮ ) ಚಂದ್ರನಲ್ಲಿ ಚಲಿಸುತ್ತಾ, ಮಾಹಿತಿ ಸಂಗ್ರಹಿಸುತ್ತದೆ.
ರೋವರ್ ನಲ್ಲಿ ಯಾವ ವೈಜ್ಞಾನಿಕ ಉಪಕರಣಗಳನ್ನು ( Payloads ) ಅಳವಡಿಸಲಾಗಿದೆ ? ಮತ್ತು ಅವುಗಳಿಗೆ ಯಾವ ಕೆಲಸವನ್ನು ವಹಿಸಿಕೊಡಲಾಗಿದೆ ? ರೋವರ್ ನಲ್ಲಿ 2 ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಗಿದೆ.
1.APXS. 2. LIBS
1 APXS ( Alpha Particle X-ray Spectrometer )
ಈ ಉಪಕರಣವು ತನ್ನಲ್ಲಿನ X-ray ಕಿರಣಗಳನ್ನು ಚಂದ್ರನ ನೆಲದ ಮೇಲೆ ಹಾಯಿಸಿ ಅಲ್ಲಿನ ಮಣ್ಣು ಮತ್ತು ಖನಿಜಗಳಲ್ಲಿರುವ ರಾಸಾಯನಿಕ ಸಂಯೋಜನೆ ಕುರಿತಾಗಿ ಮಾಹಿತಿ ಸಂಗ್ರಹಿಸುತ್ತದೆ.
2 LIBS ( Laser Induced Breakdown Spectroscope )
ಈ ಉಪಕರಣವು ತನ್ನಲ್ಲಿನ ಲೇಸರ್ ಬೆಳಕನ್ನು ಚಂದ್ರನ ಮಣ್ಣು, ಕಲ್ಲು, ಬಂಡೆಗಳ ಮೇಲೆ ಹಾಯಿಸಿ ಅವುಗಳಲ್ಲಿರುವ ಧಾತುಗಳ ಸಂಯೋಜನೆ ಕುರಿತಾಗಿ ಮಾಹಿತಿ ಸಂಗ್ರಹಿಸುತ್ತದೆ.
ಹೀಗೆ ರೋವರ್ ನಲ್ಲಿ ಅಳವಡಿಸಿದ 2 ಉಪಕರಣಗಳು ತಮಗೆ ವಹಿಸಿಕೊಟ್ಟ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ. ರೋವರ್ ನ ಚಕ್ರಗಳಲ್ಲಿ ಭಾರತದ ರಾಷ್ಟ್ರ ಲಾಂಛನ ನಾಲ್ಕು ಮುಖದ ಸಿಂಹ ಮತ್ತು ISRO ದ ಲೋಗೋಗಳನ್ನು ಅಳವಡಿಸಲಾಗಿದೆ.ಇದು ಚಂದ್ರನ ಸುತ್ತಲೂ ಚಲಿಸುವಾಗ, ಚಕ್ರದ ಗುರುತುಗಳು, ರಾಷ್ಟ್ರ ಲಾಂಛನದ ಗುರುತುಗಳು ಮತ್ತು ಇಸ್ರೋದ ಲೋಗೋದ ಗುರುತುಗಳು ಚಂದ್ರನ ಅಂಗಳದಲ್ಲಿ ಶಾಶ್ವತವಾಗಿ ಮೂಡುತ್ತವೆ (ಚಂದ್ರನಲ್ಲಿ ವಾತವಾರಣ ಇಲ್ಲದೇ ಇರುವುದರಿಂದ ಅ ಗುರುತುಗಳು ಅಳಿಯುವುದಿಲ್ಲ)
ರೋವರ್ ನಿಂದ ಬಂದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ವಿಶ್ಲೇಷಣೆಗೆ ಒಳಪಡಿಸಿದ ನಂತರ ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳು ಇಡೀ ಜಗತ್ತಿಗೆ ಅನಾವರಣಗೊಳ್ಳುತ್ತವೆ.