ಬೆಂಗಳೂರು : ವಲಸಿಗ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವದಂತಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವೇನು ಒತ್ತಡದ ಮೇಲೆ ಯಾರನ್ನೂ ಸೆಳೆಯುತ್ತಿಲ್ಲ. ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಕೆಲವರು ನಮ್ಮ ಪಕ್ಷಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ. ಕಾಂಗ್ರೆಸ್ ಐದು ವರ್ಷ ಸ್ಥಿರ ಸರ್ಕಾರ ನೀಡಲಿದೆ ಎಂಬ ನಂಬಿಕೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಬೇಡ ಎಂಬುವುದನ್ನು ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ?
ಸಚಿವ ಸ್ಥಾನ ಬಿಟ್ಟು ಕೊಡುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿರುವ ಅವರು, ಸಚಿವ ಸಂಪುಟ ಪುನಾರಚನೆ ಎಂಬುದು ಸಿಎಂ ಅಧಿಕಾರ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಸಿಎಂ ನಿರ್ಧಾರ ಮಾಡುತ್ತಾರೆ. ಆರು ತಿಂಗಳಿಗೋ, ವರ್ಷಕ್ಕೋ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಚಿವ ಮುನಿಯಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಗರಿಗೆ ತನಿಖೆ ಶಾಕ್
ಎರಡು ಮೂರು ದಿನಗಳಲ್ಲಿ ಕೋವಿಡ್ ಅಕ್ರಮ ತನಿಖೆಗೆ ಆದೇಶ ನೀಡುವ ಸಾಧ್ಯತೆಯಿದೆ. ಕೋವಿಡ್ ಅಕ್ರಮ ತನಿಖೆಗೆ ಈಗಾಗಲೇ ಹೇಳಿದ್ದೇವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖಾ ನಿಯಮಾವಳಿಗಳನ್ನು ಕೇಳಿದ್ದಾರೆ, ಶೀಘ್ರದಲ್ಲೇ ಕೊಡ್ತೀವಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.