ಬೆಂಗಳೂರು : ನಮ್ಮ ರಾಜ್ಯದ ಬೇಡಿಕೆ, ವಸ್ತು ಸ್ಥಿತಿ ಪ್ರತಿಪಾದಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ಪೀಠ ರಚಿಸಿ ವಿಚಾರಣೆ ಆಗಬೇಕೆಂದು ತೀರ್ಮಾನವಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಟ್ರಿಬ್ಯುನಲ್ ಆದೇಶ ಬಂದು, CWMA ಇದೆ. ಒಂದು ಕಡೆ ನೀರು ಬಿಟ್ಟು, ಇನ್ನೊಂದು ಕಡೆ ಪರಮಾರ್ಶೆ ಮಾಡಿ ಅಂತಾರೆ. ಸರ್ಕಾರಕ್ಕೆ ಸ್ಪಷ್ಟವಾದ ನೀತಿ ಇಲ್ಲ. ಕಾನೂನು ಅಂಶಗಳ ಮೇಲೆ ಸರ್ಕಾರ ಗಮನ ಹರಿಸಿ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ದ
ವಿಪಕ್ಷವಾಗಿ ಸಹಕಾರ ಕೊಡುತ್ತೇವೆ. ನೆಲ, ಜಲ ವಿಚಾರದಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ. ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ದರಿದ್ದೇವೆ. ಆ ಭಾಗದ ರೈತರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ರೈತರ ಕೂಗಿಗೆ ಆಕ್ರೋಶಕ್ಕೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.