ಬೆಂಗಳೂರು : ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಯವರ ಅತ್ತೆ ದೇರೆಡ್ಡಿ ನಾಗಲಕ್ಷ್ಮಮ್ಮ ಮತ್ತು ಬಿ.ಕೆ.ನಾಗರಾಜ್ ಅವರ ವಿರುದ್ಧ ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಮಾಜಿ ಶಾಸಕ ಎಂ.ದಿವಾಕರ ಬಾಬು ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಎಂ. ಹನುಮ ಕಿಶೋರ್ ಅವರು ದೂರು ದಾಖಲಿಸಿದ್ದಾರೆ.
ಎಂ.ಹನುಮ ಕಿಶೋರ್ ಅವರು ತಮ್ಮ ಆಸ್ತಿಯೊಂದನ್ನು ದೇರೆಡ್ಡಿ ನಾಗಲಕ್ಷ್ಮಮ್ಮ ಅವರಿಗೆ ಖಂಡಿತ ಕ್ರಯ ಪತ್ರದ ಮೂಲಕ ನೋಂದಣಿ ಮಾಡಿ, ಮಾರಾಟ ಮಾಡಿದ್ದರು. ಒಪ್ಪಂದದ ಉಲ್ಲಂಘನೆ, ಕ್ರಯ ಪತ್ರ ರದ್ಧತಿ ಹಾಗೂ ಒಪ್ಪಂದದ ಪ್ರಕಾರ ಆಸ್ತಿ ಖರೀದಿಗಾಗಿ ನೀಡಲಾಗಿದ್ದ ಚೆಕ್ ಕಲೆಕ್ಷನ್ ಗಾಗಿ ಬ್ಯಾಂಕ್ ತೆರಳಿದ್ದಾಗ ಶಾಕ್ ಎದುರಾಗಿತ್ತು.
ಆಗಸ್ಟ್ 2 ರಂದು ಹನುಮ ಕಿಶೋರ್ ಅವರು 20 ಕೋಟಿ ರೂ.ಗಳ ಚೆಕ್ ಅನ್ನು ನಗದಾಗಿಸಿಕೊಳ್ಳಲು ಬ್ಯಾಂಕಿಗೆ ತೆರಳಿದ್ದರು. ಖಾತೆಗೆ ಹಣ ಜಮಾ ಮಾಡಿದಾಗ ಖರೀದಿದಾರರು ಚೆಕ್ ನೀಡಿದ ಖಾತೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ಬಹಿರಂಗ ಆಗಿದೆ. ಈ ಹಿನ್ನೆಲೆಯಲ್ಲಿ ಹನುಮ ಕಿಶೋರ್ ಅವರು ವಂಚನೆ (ಕಲಂ : 420) ಪ್ರಕರಣವನ್ನು ದಾಖಲಿಸಿದ್ದಾರೆ. ಬ್ರೂಸ್ ಪೇಟೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.