ಹಾವೇರಿ : ಬೊಮ್ಮಾಯಿಯವರ ಹೊಂದಾಣಿಕೆ ರಾಜಕೀಯದಿಂದ ಬಿಜೆಪಿ ಸೋತಿದೆ. ಬೊಮ್ಮಾಯಿಯವರ ಅಹಂಕಾರದಿಂದ ಬಿಜೆಪಿ ದಹಿಸಿ ಹೋಯಿತು. ಶಾಸಕರನ್ನ ಬೊಮ್ಮಾಯಿ ಗೌರವದಿಂದ ಕಾಣಲಿಲ್ಲ. ಇವರ ಆಟ ಎಲ್ಲಿಯವರೆಗೆ ನಡೆಯುತ್ತದೆ, ನಡೆಯಲಿ ನೋಡುತ್ತಿದ್ದೇನೆ ಎಂದು ಮಾಜಿ ಸಿಎಂ ಬೊಮ್ಮಾಯೊ ವಿರುದ್ಧ ಮಾಜಿ ಶಾಸಕ ನೆಹರೂ ಓಲೇಕಾರ ಗುಡುಗಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವತ್ತಿನ ಬಿಜೆಪಿ ಸ್ಥಿತಿಗೆ ಬೊಮ್ಮಾಯಿ ಕಾರಣ. ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪನವರಂತರವರ ಕೈಯಲ್ಲಿ ಜವಬ್ದಾರಿ ಕೊಟ್ರೆ, ಪಕ್ಷ ಸಂಘಟನೆ ಆಗುತ್ತೆ ಎಂದು ಕುಟುಕಿದರು.
ನಾನು ಬಿಜೆಪಿ ಪಕ್ಷದಲ್ಲಿದ್ದೇನೆ, ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ, ನಾನು ಕಿವಿಗೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಿಂದಲು ಆಹ್ವಾನ ಬಂದಿದೆ, ಕೈ ನಾಯಕರು ಆಹ್ವಾನ ನೀಡಿದ್ದಾರೆ. ಮನಸ್ಸಿಗೆ ನೋವಾಗಿದ್ದರಿಂದ ನಾನು ತಟಸ್ಥನಾಗಿದ್ದೆ. ನನ್ನನ್ನು ಪಕ್ಷದ ಕಾರ್ಯಕ್ರಮಗಳಿಗೆ ಕರೆಯದಂತೆ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ದುರಾದೃಷ್ಟಕರ, ಪಕ್ಷ ಸಂಘಟನೆ ಮಾಡುವವರು ಮಾತನಾಡುವಂತದ್ದಲ್ಲ ಎಂದು ಬೇಸರಿಸಿದರು.
ಹಣ ಚೆಲ್ಲಿ ತಾವೊಬ್ಬರೆ ಗೆದ್ದಿದ್ದು ಬಿಟ್ರು
ಚುನಾವಣೆಯಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಜಿಲ್ಲೆಯಿಂದ ಸಿಎಂ ಆಗಿದ್ರು, ಆ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಲಿಲ್ಲ. ಹಣ ಚೆಲ್ಲಿ ತಾವೊಬ್ಬರೆ ಗೆದ್ದಿದ್ದು ಬಿಟ್ರು, ಜಿಲ್ಲೆಯ ಉಳಿದ ಕಡೆ ಗೆಲ್ಲಿಸುವ ಕೆಲಸ ಆಗಲಿಲ್ಲ. ನನ್ನ ಮೇಲೆ ಬೊಮ್ಮಾಯಿ ಸುಳ್ಳು ಆರೋಪ ಮಾಡಿದ್ರು. ಇದರಿಂದ ನನಗೆ ನಷ್ಟವಾಗಲಿಲ್ಲ, ಪಕ್ಷಕ್ಕೆ ನಷ್ಟವಾಯಿತು. ನಾಯಕನಾದವರಿಗೆ ಗಂಭಿರತೆ ಇರಬೇಕು. ಎಲ್ಲರನ್ನು ಕರೆದುಕೊಂಡು ಹೋಗುವ ಶಕ್ತಿ ಇರಬೇಕು. ಬೊಮ್ಮಾಯಿ ಬಂದ ನಂತರ ಜಿಲ್ಲೆ, ರಾಜ್ಯದಲ್ಲಿ ಪಕ್ಷ ಕುಸಿದು ಹೋಯಿತು ಎಂದು ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಕೀಳು ದೃಷ್ಟಿಯಿಂದ ನೋಡಿದ್ರು
ಇವರ ಬಂಡವಾಳ ಎಲ್ಲರಿಗು ಗೊತ್ತಾಗಿದೆ. ವರಿಷ್ಠರು ಈಗಲಾದರೂ ಆಲೋಚನೆ ಮಾಡಬೇಕು. ಅಸಮರ್ಥರ ಕೈಯಲ್ಲಿ ಅಧಿಕಾರ ಕೊಡುವುದು ಸರಿಯಲ್ಲ. ಅಸಮರ್ಥರ ಕೈಯಲ್ಲಿ ಅಧಿಕಾರ ಕೊಟ್ರೆ ಪಕ್ಷಕ್ಕೆ ಹೊಡೆತ ಬೀಳುತ್ತದೆ. ಮುಂದೆ ಮತ್ತೆ ಬೊಮ್ಮಾಯಿಗೆ ಅಧಿಕಾರ ಕೊಟ್ರೆ ಪಕ್ಷ ಮತ್ತಷ್ಟು ಕುಗ್ಗುತ್ತದೆ. ಸಿಎಂ ಇದ್ದಾಗ ಎಲ್ಲರನ್ನು ಬೊಮ್ಮಾಯಿ ಕೀಳು ದೃಷ್ಟಿಯಿಂದ ನೋಡಿದ್ರು ಎಂದು ಕಿಡಿಕಾರಿದರು.