ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ. ಕಳೆದ ಬಾರಿ ಗಣೇಶ ಕೂರಿಸಿದ್ದೇವೆ, ಈ ಬಾರಿ ರಾಜ್ಯ ಸರ್ಕಾರ ಯಾವುದೇ ಗೊಂದಲ ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬ ನಮ್ಮ ಭಾಗದಲ್ಲಿ ವಿಜ್ರಂಭಣೆಯಿಂದ ಮಾಡುತ್ತೇವೆ. ಡಿಜೆ ಸೇರಿದಂತೆ ಯಾವುದೇ ನಿರ್ಬಂಧ ಹೇರಬಾರದು ಎಂದು ತಿಳಿಸಿದರು.
ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ, ಅವರು ವಿವಾದ ಮಾಡಬಾರದು. ಅವರಿಗೂ ವರ್ಷದಲ್ಲಿ ಎರಡು ಬಾರಿ ನಮಾಜ್‌ಗೆ ಅವಕಾಶವಿದೆ. ಅನಗತ್ಯ ವಿವಾದವನ್ನು ಸರ್ಕಾರ ಮೈಮೇಲೆ ಎಳೆದುಕೊಳ್ಳಬಾರದು. ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು ಎಂದು ಜೋಶಿ ಖಡಕ್ ಆಗಿಯೇ ಹೇಳಿದರು.
ನಾನು ಧಾರವಾಡದಿಂದಲೇ ಸ್ಪರ್ಧಿಸುವೆ
ಬಾಂಬೆ ಬಾಯ್ಸ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಸದ್ಯದ ಮಟ್ಟಿಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರಿಗೆ ಮಾತಾಡಿದ್ದೇನೆ. ಆ ರೀತಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ಸೋಮಶೇಖರ್, ಹೆಬ್ಬಾರ್ ಪಕ್ಷ ಬಿಟ್ಟು ಹೋಗಲ್ಲಾ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.
ನಾಳೆ ಏನಾಗುತ್ತೆ ಅಂತ ಹೇಳಲು ನಾನು ಭವಿಷ್ಯಗಾರ ಅಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತಾಡಿದ್ದು, ಅವರು ಪಕ್ಷ ತೊರೆಯಲ್ಲ ಅಂದಿದ್ದಾರೆ. ನಾನು ಧಾರವಾಡದಿಂದಲೇ ಸ್ಪರ್ಧಿಸುವೆ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟನೆ ನೀಡಿದರು.