Wednesday, January 22, 2025

ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲ್!

ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿ ಟ್ವಿಟರ್ ಮೂಲಕ ಭಾರತ್ ಮಾಲಾ, ದ್ವಾರಕಾ ಎಕ್ಸ್‌ಪ್ರೆಸ್‌ ವೇ ನಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್​ ನಲ್ಲಿ, ಮಾನ್ಯ ನರೇಂದ್ರ ಮೋದಿ ಅವರೇ, ಹಿಂದಿನ ನಿಮ್ಮ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರರು ಮಾಡಿರುವ 40% ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ.

ನಿಮ್ಮದೇ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಎಜಿ ನೀಡಿರುವ ವರದಿಯ ಬಗ್ಗೆ ನೀವು ಯಾವಾಗ ತನಿಖೆ ನಡೆಸಿ ‘’ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂಬ ನಿಮ್ಮ ಘೋಷಣೆಗೆ ಅನುಗುಣವಾಗಿ ನುಡಿದಂತೆ ನಡೆಯುವಿರಿ?

ಇದನ್ನೂ ಓದಿ: ಜೆಡಿಎಸ್​ ಪಕ್ಷದ ಬಲವರ್ಧನೆಗೆ ಆಗಸ್ಟ್ 20ರಿಂದ ರಾಜ್ಯ ಪ್ರವಾಸ !

ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಮೂಗಿನಡಿಯಲ್ಲಿಯೇ ದ್ವಾರಕಾ ಎಕ್ಸ್‌ಪ್ರೆಸ್‌ ಹೈವೇ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ, 5 ಟೋಲ್‌ ಪ್ಲಾಜಾಗಳಲ್ಲಿ 132 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ನೀವು ಪದೇ ಪದೇ ಉಲ್ಲೇಖಿಸುವ ‘ಆಯುಷ್ಮಾನ್‌ ಭಾರತ್‌ಯೋಜನೆಯಲ್ಲಂತೂ ಮೃತಪಟ್ಟ ಸುಮಾರು 88 ಸಾವಿರ ಫಲಾನುಭವಿಗಳ ಹೆಸರಿನಲ್ಲಿ ಹೊಸದಾಗಿ ಬಿಲ್‌ಗಳನ್ನು ಕ್ಲೈಮ್‌ ಮಾಡಿ ಹಣ ನುಂಗಿ ಹಾಕಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದರ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರಿಸುವಿರಾ?

ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರೂ ಆಗಿದ್ದೀರಿ. ಭಾರತ್ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ರೂ.15.37 ಕೋಟಿ ಗಳಿಂದ ರೂ.32 ಕೋಟಿ ವರೆಗೆ ಹೆಚ್ಚುವರಿ ಖರ್ಚು ತೋರಿಸಲಾಗಿದೆ ಎಂದು ಸಿಎಜಿ ವರದಿ ಮಾಡಿದೆ.

ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? 

ಸಂಪರ್ಕ ವ್ಯವಸ್ಥೆ ಸುಧಾರಣೆಯ ಅತಿ ಪ್ರಚಾರದ ಭಾರತ ಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅಕ್ರಮ ನಡೆದಿದೆ ಮತ್ತು ಆ ಯೋಜನೆ ಬಗೆಗೆ ವಿಸ್ತೃತವಾದ ವರದಿಯೇ ಸಲ್ಲಿಕೆಯಾಗಿಲ್ಲ. ಹೀಗಿದ್ದರೂ 3,500 ಕೋಟಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಸಿಎಜಿ ಲೋಪವನ್ನು ಎತ್ತಿ ತೋರಿಸಿದೆ. ಪ್ರಧಾನಿ ಮೋದಿ ಅವರೇ, ಈ ಬಗ್ಗೆ ನಿಮ್ಮ ಮೌನವನ್ನು ಅಕ್ರಮದಲ್ಲಿ ಷಾಮೀಲಾಗಿದ್ದೀರಿ ಎಂದು ವ್ಯಾಖ್ಯಾನಿಸಬಹುದೇ?

ಪ್ರಧಾನಿ ನರೇಂದ್ರ ಮೋದಿ ಅವರೇ, ದಿಲ್ಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್ ಪ್ರೆಸ್ ವೇ ಯೋಜನೆಯಲ್ಲಿ ಅಕ್ರಮ ನಡೆದಿರುವ ವರದಿಗಳಿವೆ. ಪ್ರತಿ ಕಿ.ಮೀ.ಗೆ 18.2 ಕೋಟಿ ರೂ.ಗಳಿಂದ 251 ಕೋಟಿ ರೂ.ಗಳ ವರಗೆ ನಿರ್ಮಾಣ ವೆಚ್ಚವನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಸಲಾಗಿರುವ ಆರೋಪಗಳಿವೆ. ಈ ಬಗ್ಗೆ ಸಮಗ್ರ ರೂಪದ ತನಿಖೆಯ ಅಗತ್ಯ ಇದೆ ಎಂದು ನಿಮಗೆ ಅನಿಸುವುದಿಲ್ಲವೇ?

ಇದನ್ನೂ ಓದಿ: ಯಾರು ಬರ್ತಾರೆ ಅನ್ನೋದನ್ನ ನಾನ್ ಹೇಳಲ್ಲ : ಡಿ.ಕೆ ಶಿವಕುಮಾರ್

ಮಾನ್ಯ ನರೇಂದ್ರ ಮೋದಿ ಅವರೇ, ನೀವು I.N.D.I.A ಒಕ್ಕೂಟವನ್ನು ಭ್ರಷ್ಟರ ಒಕ್ಕೂಟವೆಂದು ಸುಳ್ಳು ಆರೋಪ ಹೊರಿಸಿ ಸಂಭ್ರಮಿಸುತ್ತೀರಿ, ನಿಮ್ಮದೇ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸಿಎಜಿ ವರದಿಯು ಬಟಾಬಯಲು ಮಾಡಿದ್ದರೂ ಕಣ್ಣು, ಬಾಯಿಮುಚ್ಚಿ ಕೂತಿದ್ದೀರಿ. ಇದು ಆತ್ಮವಂಚಕ ನಡವಳಿಕೆ ಅಲ್ಲವೇ?

ಮಾನ್ಯ ನರೇಂದ್ರ ಮೋದಿ ಅವರೇ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ನಿಮ್ಮದೇ ಪರಿವಾರ ಆರೋಪಗಳನ್ನು ಮಾಡತೊಡಗಿದೆ. ‘ಪಿಎಂ ಕೇರ್ಸ್‌ ಫಂಡ್’‌ ಅನ್ನು ಸರ್ಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡುತ್ತಿದ್ದಾರೆ. ಆದರೆ, ನಿಮ್ಮ ಸರ್ಕಾರ ಅದನ್ನು ಸಾರ್ವಜನಿಕ ದತ್ತಿ ಟ್ರಸ್ಟ್‌ ಎಂದು ಹೆಸರಿಸಿ ಅದನ್ನು ಮಾಹಿತಿ ಹಕ್ಕಿನಿಂದ ಹೊರಗಿರಿಸಿರಿದೆ.

ಈ ದುಡ್ಡಿನಿಂದ ಯಾರಿಗೆ ಲಾಭವಾಗುತ್ತಿದೆ ಹೇಳಬಲ್ಲಿರಾ? ಎಂದು ಟ್ವಿಟರ್​ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಪ್ರಧಾನಿ ಮೋದಿಯವರಿಗೆ ಹಾಕಲಾಗಿದೆ.

RELATED ARTICLES

Related Articles

TRENDING ARTICLES