Monday, December 23, 2024

ಪತ್ನಿ ಮೇಲೆ ಕಣ್ಣಾಕಿದ ‘ಮೇಸ್ತ್ರಿ’ಯನ್ನ ಮಸಣಕ್ಕೆ ಕಳುಹಿಸಿದ ಕಾರ್ಮಿಕ

ಬೆಂಗಳೂರು : ತನ್ನ ಬಳಿ ಗಾರೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮೇಸ್ತ್ರಿ ದಾರುಣವಾಗಿ ಹತ್ಯೆಯಾಗಿದ್ದಾನೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿಯ ವಸುಂಧರ ಲೇಔಟ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆ ನಡೆದಿದೆ. ದಿಲೀಪ್ ಮೃತ ಮೇಸ್ತ್ರಿ. ತನ್ನ ಬಳಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನಿಂದಲೇ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ‌.

ಮೂಲತಃ ತಮಿಳುನಾಡು ಮೂಲದ ದಿಲೀಪ್ ಗಾರೆ ಮೇಸ್ತ್ರಿಯಾಗಿದ್ದು, ಕಳೆದ ಕೆಲವು ತಿಂಗಳುಗಳ ಹಿಂದೆ ಬೇಗಿಹಳ್ಳಿಯ ವಸುಂಧರ ಲೇಔಟ್ ನಲ್ಲಿ ಒಪ್ಪಂದ ಪಡೆದುಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದ. ಈತನ ಬಳಿ ಹತ್ತಾರು ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ರಾಯಚೂರು ಮೂಲದ ಕೂಲಿ ಕಾರ್ಮಿಕ ಮಹಿಳೆ ಜೊತೆಗೆ ಮೇಸ್ತ್ರಿ ದಿಲೀಪ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಹೆಂಡ್ತಿ ಜೊತೆ ಇದ್ದ ಮೇಸ್ತ್ರಿ

ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮೇಸ್ತ್ರಿ ದಿಲೀಪ್ ಹಾಗೂ ಮಹಿಳೆ ಜೊತೆಯಲ್ಲಿರುವುದನ್ನ ಕಂಡ ಮಹಿಳೆ ಪತಿ ಹೊನ್ನಪ್ಪ ಆಕ್ರೋಶಗೊಂಡು ಅಲ್ಲಿಯೇ ಇದ್ದ ದೊಣ್ಣೆಯಿಂದ ಮೇಸ್ತ್ರಿ ದಿಲೀಪ್ ತಲೆಗೆ ಹೊಡೆದಿದ್ದಾನೆ. ಇನ್ನೂ ನಿರ್ಮಾಣ ಹಂತದ ಬಿಲ್ಡಿಂಗ್ ಬಳಿ ಗಲಾಟೆ ಶಬ್ದ ಕೇಳಿ ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳು, ಕೂಲಿ ಕಾರ್ಮಿಕರು ಅಲ್ಲಿಗೆ ಓಡಿ ಬಂದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೇಸ್ತ್ರಿ ದಿಲೀಪ್ ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ರು ಚಿಕಿತ್ಸೆ ಫಲಾಕಾರಿಯಾಗದೆ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್ ಎಸ್ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಬನ್ನೇರುಘಟ್ಟ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹೊನ್ನಪ್ಪನನ್ನು ವಶಕ್ಕೆ ಪಡೆದು ತನಿಖೆಯನ್ನ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES