ಬೆಂಗಳೂರು : ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆದವರು. ಅವರು ಮಾತಾಡಿದ್ರೆ ಜನ ಗಮನಿಸುತ್ತಾರೆ. ಹೌದಪ್ಪ.. ಇವರು ಹೇಳೋದ್ರಲ್ಲಿ ಸತ್ಯ ಇರುತ್ತೆ ಅಂತ ಜನ ನಂಬ್ತಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರು ಆರೋಪ ಮಾಡಿ ದಾಖಲಾತಿ ಬಿಡುಗಡೆ ಮಾಡದೇ ಹೋದ್ರೆ ಗೌರವ ಸಿಗೊಲ್ಲ ಎಂದು ಚಾಟಿ ಬೀಸಿದ್ದಾರೆ.
ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಟೀಕೆ-ಟಿಪ್ಪಣಿ ಮಾಡೋದಕ್ಕೆ ನಮಗೇನು ಅಭ್ಯಂತರ ಇಲ್ಲ. ಅವರಿಗೆ ಟೀಕೆ ಮಾಡುವ ಹಕ್ಕಿದೆ. ನಮ್ಮನ್ನು ತಿದ್ದೋ ಹಕ್ಕಿದೆ. ಆದರೆ, ಇಲ್ಲಸಲ್ಲದ ಆರೋಪ ಮಾಡೋದು, ದಾಖಲಾತಿ ಇಲ್ಲದೆ ಮಾತಾಡೋದು ಸರಿಯಲ್ಲ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ : ಆರ್.ಆರ್ ನಗರದವ್ರಿಗೆ ಬಾಗಿಲು ಓಪನ್ ಇರುತ್ತೆ : ಮುನಿರತ್ನ
ಜನರಿಗೆ ಮಾತು ಕೊಟ್ಟಿದ್ದೇವೆ
ಇಷ್ಟು ಭ್ರಷ್ಟಾಚಾರ ಸರ್ಕಾರ ನೋಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನಾನು ಮಾತನಾಡೊಲ್ಲ. ಆದರೆ, ನಾವು ಜನರಿಗೆ ಮಾತು ಕೊಟ್ಟಿದ್ದೇವೆ. ಒಳ್ಳೆಯ ಆಡಳಿತ ಕೊಡ್ತೀವಿ ಅಂತ. ಸಿಎಂ ಮತ್ತು ಸಚಿವರು ಅದರಂತೆ ಕೆಲಸ ಮಾಡ್ತಿದ್ದಾರೆ. ಕೇವಲ ಆಪಾದನೆ ಮಾಡೋಕೆ ಅಂತ ಆರೋಪ ಮಾಡೋದು ಬೇಡ. ಸುಮ್ಮನೆ ಆರೋಪ ಮಾಡೋದು ವಿಪಕ್ಷಗಳಿಗೆ ಸರಿ ಅನ್ನಿಸೋದಿಲ್ಲ ಎಂದು ಕಿಡಿಕಾರಿದ್ದಾರೆ.