ಬೆಂಗಳೂರು : ನನ್ನಲ್ಲಿ ಕೊರತೆ ಇರುವುದನ್ನು ಅವರು ತುಂಬಬೇಕು ಅಂತಾದರೆ, ಅವರ 1,500 ಕೋಟಿ ವೈಟ್ ಮನಿಯನ್ನು ನನಗೆ ಟ್ರಾನ್ಸ್‌ಫರ್ ಮಾಡಬೇಕು. ಆದರೆ, ಅದು ನನಗೆ ಖಂಡಿತಾ ಬೇಡ. ಅವರ ಸಿದ್ಧ ವಿದ್ಯೆಯನ್ನು ಜನರಿಗೆ ಕೊಟ್ಟರೆ ಜನ ದೇವರು ಅಂತ ಭಾವಿಸುತ್ತಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದ್ದಾರೆ.
ಸಿ.ಟಿ. ರವಿಗೆ ಟ್ರೀಟ್ ಮೆಂಟ್ ಕೊಡಿಸಬೇಕು ಎಂಬ ಡಿಸಿಎಂ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ನಾನು ರೋಗಿಯೂ ಅಲ್ಲ, ಅವರು ಡಾಕ್ಟರೂ ಅಲ್ಲ. ಅಜ್ಜಯ್ಯನ ಹೇಳಿಕೆಯೂ ನನ್ನದಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಅಥವಾ ಮುನ್ನ ಸರ್ಕಾರ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರಿಗೆ ಯಾರೋ ಸಂಪರ್ಕದಲ್ಲಿರಬಹುದು, ಮಾಹಿತಿ ಇರಬಹುದು. ಮಾಹಿತಿ ಇಲ್ಲದೇ ಅವರು ಹೇಳಲು ಸಾಧ್ಯವೇ? ಈಗ ಯಾರ ಮಾತನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಸರಿಯಿದ್ದರೆ ಎರಡು ತಿಂಗಳಲ್ಲಿ ಶಾಸಕರು ಪತ್ರ ಬರೆಯುತ್ತಿರಲಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿರಲಿಲ್ಲ. ಯತ್ನಾಳ್ ಹೇಳಿಕೆಯನ್ನು ಅಲ್ಲಗಳೆಯಲು ಸಾಧ್ಯವೇ? ಇನ್ನೊಂದು ಆರು ತಿಂಗಳು ಕಾದು ನೋಡಬೇಕು ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.
ಇವ್ರು ಗುರುವಿನ ಮಾತು ಮೀರಿರಬಹುದು
ಡಿ.ಕೆ. ಶಿವಕುಮಾರ್ ರಾಜಕೀಯ ಗುರು ಎಂಬ ಎಸ್.ಟಿ. ಸೋಮಶೇಖರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವ ಹಂತದ ಗುರು ಅಂತ ಅವರು ಹೇಳಿಲ್ಲ. ಆದರೆ, ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಒಂದೋ ಇವರು ಗುರುವಿನ ಮಾತು ಮೀರಿರಬಹುದು ಅಥವಾ ಗುರುವೇ ಇವರಿಗೆ ಬೆಂಬಲ ಕೊಟ್ಟಿರಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಗೊತ್ತಿದ್ದಂತೆ ಯಾರೂ ಹೋಗುವವರು ಇಲ್ಲ. ಒಂದು ಸಲ ಅನುಮಾನ ಬಂದರೆ ಎಲ್ಲರನ್ನೂ ಅಪನಂಬಿಕೆಯಿಂದ ನೋಡಬೇಕಾಗುತ್ತದೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.