ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅಪಾರ ಜನಮನ್ನಣೆ ಪಡೆದಿದ್ದಾರೆ. ವಿರೋಧ ಪಕ್ಷದವರೂ ಹಾಡಿ ಹೊಗಳ್ತಿದ್ದಾರೆ. ಕೈಂಕರ್ಯ ತೊಟ್ಟು ಶಿವಮೊಗ್ಗ ಅಭಿವೃದ್ಧಿಗೆ ಶ್ರಮಿಸ್ತಿದ್ದಾರೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಘಣ್ಣ ನಾಯಕತ್ವವನ್ನು ಎಲ್ಲರೂ ಒಪ್ಪಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ರಾಘಣ್ಣ ಸಂಸದರಾಗಬೇಕೆಂಬ ಅಪೇಕ್ಷೆ ಜನರದ್ದು ಎಂದು ತಿಳಿಸಿದರು.
ಚುನಾವಣೆ ಸಂದರ್ಭ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಲವು ಆರೋಪ ಮಾಡಿತ್ತು. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿತ್ತು. ಕಾಂಗ್ರೆಸ್ ಹಳೆ ಚಾಳಿ ಬಿಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗಾಗಲೇ ಸಚಿವರ ಹೆಸರು ಕೇಳಿ ಬರ್ತಿದೆ. ಎರಡೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಪಾಪುಲಾರಿಟಿ ಕಡಿಮೆ ಆಗಿರುವುದು ಆಶ್ಚರ್ಯ ಎಂದು ಕುಟುಕಿದರು.
ಸ್ವಯಂಕೃತ ಅಪರಾಧದ ಫಲ
ಇದು ಅವರ ಸ್ವಯಂಕೃತ ಅಪರಾಧದ ಫಲ. 70ರಿಂದ 80 ಕೋಟಿ ರೂ. ಸಾಲ ಮಾಡ್ತಿದ್ದಾರೆ. ಆರ್ಥಿಕ ಶಿಸ್ತು ಉಲ್ಲಂಘನೆ ಮಾಡ್ತಿದ್ದಾರೆ. ಸರ್ಕಾರದ ಬಗ್ಗೆ ಹಾದಿ ಬೀದಿಯಲ್ಲಿ ಮಾತಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತನಾಡಿದ ಕೆಂಪಣ್ಣ ಈಗ ಮಾತಾಡುತ್ತಿಲ್ಲ. ಸಂಬಳ ಕೊಡಲೂ ಸಾಧ್ಯ ಆಗ್ತಾ ಇಲ್ಲ. ವಿವಿಧ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ ಎಂದು ದೂರಿದರು.
ಸಚಿವರು ಕರೆಂಟ್ ಕಡಿತ ಮಾಡ್ತೀವಿ ಅಂದಿದ್ದಾರೆ. ಆದರೆ, ಈಗಾಗಲೇ ಲೋಡ್ ಶೆಡ್ಡಿಂಗ್ ಚಾಲ್ತಿಯಲ್ಲಿದೆ. ರೈತರಿಗೆ ನೀರು ಕೊಡಲೂ ಆಗ್ತಾ ಇಲ್ಲ. ಅಬ್ಬರದ ಪ್ರಚಾರದ ಮೇಲೆ ಸರ್ಕಾರ ಕಾಲ ಕಳೀತಾ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.