ಮಂಡ್ಯ : ಈತನ ಅದೃಷ್ಟ ಚೆನ್ನಾಗಿದೆ. ಆತ ಗೆದ್ದಾಗೆಲ್ಲ ಅಧಿಕಾರ ಸಿಕ್ಕಿ, ದುಡ್ಡು ಮಾಡ್ತಾನೆ. ಮಾಟ, ಮಂತ್ರ, ವಾಮಚಾರ ಮಾಡಿಸುವುದೇ ಈತನ ಕೆಲಸ ಎಂದು ಏಕವಚನದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಗುಡುಗಿದ್ದಾರೆ.
ನಾಗಮಂಗಲದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಈತ ಸತ್ಯವನ್ನು ಸುಳ್ಳು.. ಸುಳ್ಳು.. ಅಂತ 10 ಬಾರಿ ಹೇಳಿ ಸುಳ್ಳು ಮಾಡ್ತಾನೆ. ನಾವು ಗೆದ್ದಾಗ ವಿರೋಧ ಪಕ್ಷದಲ್ಲಿ ಕೂತು ಬಾಯಿ ಬಡ್ಕೋತೀವಿ. ಜನಸಾಮಾನ್ಯರು ಚಲುವರಾಯಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ರೆ ನಾವು ಸುಮ್ಮನಿರಲ್ಲ ಎಂದು ಕಿಡಿಕಾರಿದ್ದಾರೆ.
ಪುಟ್ಟೇಗೌಡರಿಗೆ ಈತ ಬಿಡಿ, ಸಿಗರೇಟ್ ತಂದು ಕೊಡ್ತಿದದ್ದು ಸುಳ್ಳಾ? ಶಿವರಾಮೇಗೌಡ ಬಳಿ 5 ಸಾವಿರಕ್ಕೆ ಬಂದಿದದ್ದು ಸುಳ್ಳಾ? ಈತನನ್ನು ಜಿ.ಪಂ ಗೆಲ್ಸಿ, ಉಪಾಧ್ಯಕ್ಷ, ಶಾಸಕ, ಸಚಿವ, ಎಂಪಿಯನ್ನಾಗಿಸಿದ್ದು ಜೆಡಿಎಸ್. ನಿಯತ್ತಿಲ್ಲದವ ಈ ಚಲುವರಾಯಸ್ವಾಮಿ. ಹಿಟ್ಟಿಕ್ಕಿದವಳನ್ನೇ ಇಟ್ಟುಕೊಳ್ಳುವವರನ್ನು ಏನು ಅಂತ ಕರಿಯೋದು? ಎಂದು ಕೆಂಡವಾಗಿದ್ದಾರೆ.
ನನ್ಗೆ ಭಯವೂ ಇಲ್ಲ, ಗೌರವವೂ ಇಲ್ಲ
ನನ್ನ ಚರಿತ್ರೆ ಬಗ್ಗೆ ಮಾತನಾಡ್ತಾನೆ, ಇವನ ಚರಿತ್ರೆ ಹಳಸಿ ಹೋಗಿದೆ. ಇವನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನೊಣ ಬಿದ್ದ ನಮ್ಮ ತಟ್ಟೆ ನೋಡ್ತಾನೆ. ನಾನು ಸೋತಿದ್ದೀನಿ, ಸತ್ತಿಲ್ಲ. 30ರಿಂದ 40 ಸಾವಿರಲ್ಲಿ ಸೋತಿದ್ರೆ ರಾಜಕಾರಣವೆ ಬಿಟ್ಟು ಬಿಡ್ತಿದ್ದೆ. 47 ಸಾವಿರ ಅಂತರದಲ್ಲಿ ಸೋತವನೆ ತಲೆ ಎತ್ಕೊಂಡು ಬಂದಿದ್ದಾನೆ. ನಾನು 4 ಸಾವಿರದಲ್ಲಿ ಸೋತವನು, ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು. ನಾನು ಎಲ್ಲರಿಗೂ ಗೌರವ ಕೊಡ್ತೇನೆ. ಆದ್ರೆ, ಚಲುವರಾಯಸ್ವಾಮಿ ಬಗ್ಗೆ ನನಗೆ ಭಯವೂ ಇಲ್ಲ, ಗೌರವವೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.