ಮೈಸೂರು : ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದ ಮಳೆ ಆಗಿಲ್ಲ. ಆದ್ದರಿಂದ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಂಕಷ್ಟ ಸೂತ್ರವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡೂ ಪಾಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ನೀರಿಲ್ಲ. ಆದಾಗ್ಯೂ ತಮಿಳುನಾಡು ಸರ್ಕಾರವು ಕಾವೇರಿ ನದಿ ನೀರು ಬಿಡುವಂತೆ ಮತ್ತೆ ಕ್ಯಾತೆ ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಸರಿಯಾಗಿ ಮಳೆಯಾಗದೆ ನಮಗೇ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ಅಲ್ಲಿಗೆ ಹರಿಸುತ್ತಿದ್ದೆವು. ಈ ಬಾರಿ ಕೊಡಲಾಗಿಲ್ಲ. ನಾವು ಹೆಚ್ಚುವರಿ ನೀರು ಹರಿಸಿಲ್ಲವೆಂದು ತಮಿಳುನಾಡು ತಗಾದೆ ತೆಗೆದಿದೆ. ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನೋಡಬೇಕಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.