ಬೆಂಗಳೂರು : ರಾಜ್ಯದಲ್ಲಿ ಇಂದು ಭಾರಿ ದುರಂತವೊಂದು ಸಂಭವಿಸಿದ್ದು, ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರದ ಶ್ರೀ ಸಿದ್ದಗಂಗಾ ಮಠದ ಹಿಂಭಾಗದಲ್ಲಿದ್ದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಕೊನೆಯುಸಿರೆಳೆದಿದ್ದಾರೆ. ವಿದ್ಯಾರ್ಥಿಗಳಾದ ಶಂಕರ್(11), ಹರ್ಷಿತ್ (11), ಬೆಂಗಳೂರು ಮೂಲದ ಲಕ್ಷ್ಮೀ (33) ಹಾಗೂ ಯಾದಗಿರಿ ಮೂಲದ ಮಹದೇವಪ್ಪ (40) ಮೃತ ದುರ್ದೈವಿಗಳು.
ಕಾಲು ತೊಳೆಯಲೆಂದು ಬಾಲಕನೋರ್ವ ಗೋಕಟ್ಟೆಗೆ ಇಳಿದಿದ್ದ. ಕಾಲು ಜಾರಿ ಬಿದ್ದ ಆತನನ್ನು ರಕ್ಷಿಸಲು ಹೋಗಿ ತಾಯಿ ಕೂಡ ನೀರಿನಲ್ಲಿ ಮುಳುಗಿದ್ದಾರೆ. ತಾಯಿಯನ್ನು ರಕ್ಷಿಸಲು ಮತ್ತೋರ್ವ ಬಾಲಕ ತೆರಳಿದ್ದು, ಆತನೂ ನೀರುಪಾಲಾಗಿದ್ದಾನೆ.
ಬಾಲಕ ರಂಜಿತ್ ಪಾರು
ಇದನ್ನು ಕಂಡ ಮಹದೇವಪ್ಪ ಬಾಲಕನನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳ ಆತನೂ ಮೃತಪಟ್ಟಿದ್ದಾನೆ. ಅದೃಷ್ಟವಶಾತ್ ನೀರುಪಾಲಾಗುತ್ತಿದ್ದ ರಂಜಿತ್ ಎಂಬ ಬಾಲಕನ್ನು ರಕ್ಷಣೆ ಮಾಡಲಾಗಿದೆ. ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ. ಈ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರವಾದ ಹಿನ್ನೆಲೆ ಮಕ್ಕಳನ್ನು ನೋಡಲು ಇಂದು ಸಿದ್ದಗಂಗಾ ಮಠದಲ್ಲಿ ವಾಡಿಕೆಯಂತೆ ಪೋಷಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಮಕ್ಕಳನ್ನು ನೋಡಲು ಬಂದ ಪೋಷಕರು ಮಕ್ಕಳ ಜೊತೆ ಓಡಾಡಲು ಕರೆದುಕೊಂಡು ಹೋಗಿದ್ದು ದುರ್ಘಟನೆಗೆ ಕಾರಣವಾಗಿದ್ದಾರೆ