ಬೆಂಗಳೂರು : ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಮೇಲೆ ದಾಖಲಾಗಿದ್ದ ಕೊರೊನಾ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಹಿಂಪಡೆಯುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಕಮಿಷನ್ ಆರೋಪ ವಿಚಾರ ಸಂಪುಟ ಸಭೆಯಲ್ಲಿ ಸಮಾಲೋಚನೆಗೆ ಬಂದಿದ್ದು ಎಲ್ಲಾ ಸಚಿವರು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ಕೊಡುವಂತೆ ಸೂಚನೆ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು 4ನೇ ದಿನದ ಸಚಿವ ಸಂಪುಟ ಸಭೆ ನಡೆಯಿತು. 17 ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಅದರಲ್ಲಿ ಸುಮಾರು 16 ಮಹತ್ವದ ತಿರ್ಮಾನಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಡಾ.ಎಂ.ಹೆಚ್.ನಾಗೇಶ್ ವಾಣಿಜ್ಯ ಸಹಾಯಕ ಆಯುಕ್ತ, ಡಾ. ನಾಗಮಣಿ ಮತ್ತು ಡಾ ಉಷಾಕುಂದರಗಿ ಹಿರಿಯ ಸ್ತ್ರೀರೋಗ ತಜ್ಞರನ್ನ ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡಲು ತಿರ್ಮಾನ ಕೈಗೊಳ್ಳಲಾಯಿತು.
15 ಜಿಲ್ಲಾಸ್ಪತ್ರೆಯಲ್ಲಿ MRI ಸ್ಕಾನ್ ಅಳವಡಿಕೆ
ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಕೃಷ್ಟ ಕೇಂದ್ರ ಸ್ಥಾಪನೆಗೂ ಕ್ಯಾಬಿನೇಟ್‌ನಲ್ಲಿ ಅನುಮತಿ ನೀಡಲಾಯಿತು. 5 ಜಿಲ್ಲೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾನ್ ಹಾಗೂ 15 ಜಿಲ್ಲೆ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾನ್ ಅಳವಡಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿತು.
‘ಕೈ ನಾಯಕರ ಮೇಲೆ 9 ಪ್ರಕರಣಗಳು ದಾಖಲು
ಇದೇ ವೇಳೆ ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಮೇಕೆದಾಟು ಪಾದಯಾತ್ರೆ ವೇಳೆ ಕೊರೋನಾ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ ಸಿದ್ದರಾಮಯ್ಯ ಡಿಕೆಶಿ ಸೇರಿದಂತೆ ಕಾಂಗ್ರೆಸ್‌ನ ಮುಖಂಡರ ಮೇಲೆ 9 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇಂದಿನ ಸಂಪುಟ ಸಭೆಯಲ್ಲಿ ಆ ಪ್ರಕರಣಗಳನ್ನು ಹಿಂಪಡೆಯುವ ತಿರ್ಮಾನ ಮಾಡಲಾಯಿತು.
ಇನ್ನು, ಗುತ್ತಿಗೆದಾರರ ಕಮಿಷನ್ ಹಾಗು ಚೆಲುವರಾಯಸ್ವಾಮಿ ವಿರುದ್ಧದ ಲಂಚದ ಆರೋಪದ ಪತ್ರದ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ರಾಪವಾಗಿದೆ. ಇದು ರಾಜಕೀಯ ಆರೋಪ. ಇದಕ್ಕೆ ಎಲ್ಲಾ ಸಚಿವರು ಉತ್ತರ ಕೊಡಬೇಕೆಂದು ಸಂಪುಟ ಸೂಚಿಸಿದೆ.