ಬೆಂಗಳೂರು : ಡಿ.ಕೆ ಶಿವಕುಮಾರ್ ಕಮಿಷನ್ ಕೇಳಿದ್ದಾರೆ ಅಂತ ಅಜ್ಜಯ್ಯನ ಮೇಲೆ ಆಣೆಗೆ ಸವಾಲು ಹಾಕಿದ್ದಾರೆ. ನೀವು ಸರಿ ಇದ್ರೆ ಯಾಕೆ ದೇವಸ್ಥಾನಕ್ಕೆ ಹೋಗ್ತಾ ಇಲ್ಲ. ಗುತ್ತಿಗೆದಾರರ ಕಮಿಷನ್ ಆರೋಪ ಸರಿಯಾಗಿದೆ. ಡಿಕೆಶಿ ಕಮಿಷನ್ ಕೇಳಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಗುತ್ತಿಗೆದಾರರು ಡಿ.ಕೆ ಶಿವಕುಮಾರ್ ಬಗ್ಗೆ ದೂರು ಕೊಟ್ಟಿದ್ದಾರೆ. ಕಮಿಷನ್ ವಿಚಾರವಾಗಿ ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಇದು ಸತ್ಯ ಇದೆ. ಗುತ್ತಿಗೆದಾರರ ಬಾಕಿ ಇರುವುದರಿಂದ ಕಾಮಗಾರಿ ಆಗುತ್ತಿಲ್ಲ. ಅರ್ಧಂಬರ್ಧ ಕಾಮಗಾರಿಗಳು ಆಗಿವೆ. ಕೂಡಲೇ ಗುತ್ತಿಗೆದಾರರ ಬಾಕಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಬರೆದ ಪತ್ರ ನಕಲಿ ಅಂತಿದ್ದಾರೆ. ಪತ್ರ ನಕಲಿ ಇದ್ರೂ ಕೂಡ ವಿಷಯ ಅಸಲಿ ಇದೆ. ಬಿ.ಆರ್. ಪಾಟೀಲ್, ಹಿರಿಯ ಶಾಸಕರು ಸಚಿವರು ಕೈಗೆ ಸಿಗಲ್ಲ ಅಂತ ಆರೋಪ ಮಾಡಿದ್ರು. ಮಧ್ಯವರ್ತಿಗಳ ಮೂಲಕ ಹಣ ಕೇಳುತ್ತಿದ್ದಾರೆ ಅಂತ ಆರೋಪಿಸಿದ್ರು. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಇಂಥ ಅಧಃಪತನ ನಾನು ಕಂಡಿಲ್ಲ : ಹೆಚ್.ಡಿ ದೇವೇಗೌಡ
ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು
ಮತ್ತೊಂದು ಕಡೆ ಬೆಲೆ ಏರಿಕೆ ಆಗುತ್ತಿದೆ. ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ. ಕೇವಲ ಎರಡು ತಿಂಗಳಲ್ಲಿ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಪತ್ರ ಬರೆದ ವಿಚಾರವನ್ನು ಬಿಜೆಪಿ ತಲೆಗೆ ಕಟ್ಟುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಚಲುವರಾಯಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರರಿಗೆ ರಾಜ್ಯದ್ಯಂತ 45 ಸಾವಿರ ಕೋಟಿ ಬರಬೇಕು. ಬೆಂಗಳೂರಿನಲ್ಲಿ 3 ಸಾವಿರ ಕೋಟಿ ಬರಬೇಕು. ನಾವು ಆರ್ಥಿಕ ಶಿಸ್ತು ಕಾಪಾಡಿ ಅಧಿಕಾರ ಬಿಟ್ಟಿದ್ವಿ. ಈಗ ಕಾಂಗ್ರೆಸ್ ಸರ್ಕಾರ ಬಂದು ಅವರ ನೀತಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಎರಡು ತಿಂಗಳಲ್ಲಿ ನಡೆದ ಭ್ರಷ್ಟಾಚಾರಕ್ಕೆ ಈ ಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.