ಬೆಂಗಳೂರು : ಈ ರಾಜ್ಯದಲ್ಲಿ ಸಿಎಂ ಮತ್ತು ಸೂಪರ್ ಸಿಎಂ ಆಳ್ವಿಕೆ ನಡೀತಿದೆ. ಡಿಕೆಶಿ ಹೆಸರಿಗೆ ಮಾತ್ರ ಡೆಪ್ಯುಟಿ ಸಿಎಂ. ಆದ್ರೆ, ನಿಜವಾಗಿಯೂ ಡಿಕೆಶಿ ಸೂಪರ್ ಸಿಎಂ. ಡಿಸಿಎಂ ಅಧಿಕಾರ ವ್ಯಾಪ್ತಿ ಮೀರಿ ಸೂಪರ್ ಸಿಎಂ ಆದೇಶ ಮಾಡ್ತಿದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ 16 ಜನ ಶಾಸಕರು ಗೆದ್ದಿದ್ದಾರೆ. ನಮ್ಮ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಿಲ್ಲಬಾರದು. ಅಭಿವೃದ್ಧಿ ನಿಲ್ಲಬಾರದು ಅಂದ್ರೆ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಲಿ. 24 ಗಂಟೆ ಒಳಗೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡಿಸಲಿ. ಇಲ್ಲದಿದ್ದರೆ ಈ ಸರ್ಕಾರ ಎಟಿಎಂ ಸರ್ಕಾರ ಅಂತ ಸಾಬೀತಾಗಲಿದೆ. ಗುತ್ತಿಗೆದಾರರ ಹಿಂದೆ ಯಾರಿದಾರೆ ಅನ್ನೋದು ಮುಖ್ಯ ಅಲ್ಲ. ವಿಚಾರ ಸತ್ಯ ಅಲ್ವಾ? 40% ಕಮೀಷನ್ ಆರೋಪದ ಹಿಂದೆ ಯಾರಿದ್ರು ಹಾಗಿದ್ರೆ? ಎಂದು ಡಿಕೆಶಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.
ಈ ಸರ್ಕಾರವೇ ಒಂದು ರೀತಿ ‘ನಕಲಿ’
ಕಾಂಗ್ರೆಸ್ನವ್ರು ಯಾವುದೇ ಪತ್ರವೂ ನಕಲಿ ಅಂತಾರೆ. ಗುತ್ತಿಗೆದಾರರ ಪತ್ರ ನಕಲಿ ಅಂತಾರೆ, ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧದ ಪತ್ರ ನಕಲಿ ಅಂತಾರೆ. ಈ ಸರ್ಕಾರವೇ ಒಂದು ರೀತಿಯಲ್ಲಿ ನಕಲಿ. ಎಲ್ಲಾ ವಿಚಾರಗಳನ್ನು ಇಟ್ಕೊಂಡು ಬಿಜೆಪಿ ವ್ಯವಸ್ಥಿತ ಹೋರಾಟ ಮಾಡಲಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಹೋರಾಟ ಮಾಡಲಿದೆ ಎಂದು ಹೇಳಿದರು.