Wednesday, January 22, 2025

ಬಾರದೂರಿಗೆ ‘ಚಿನ್ನಾರಿ ಮುತ್ತನ ಚಿನ್ನ’.. ಹೀಗಿತ್ತು ಅಂತಿಮ ವಿದಾಯ

ಬೆಂಗಳೂರು : ನೂರು ಕಾಲ ಬದುಕಿ ಬಾಳಬೇಕಿದ್ದ ಮುದ್ದಾದ ಹಾಗೂ ಮುಗ್ಧ ಜೀವವೊಂದು ಕಾಲನ‌ ಕರೆಗೆ ಓಗೊಟ್ಟು ಬಾರದೂರಿಗೆ ಪಯಣ ಬೆಳೆಸಿದೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಂತಿಮ ನಮನದ ನಂತರ ಸಾವಿರಾರು ಮಂದಿ ಅಂತಿಮಯಾತ್ರೆಯಲ್ಲಿ ಭಾಗಿಯಾದರು.

ತಂದೆ ಬಿ.ಕೆ. ಶಿವರಾಂ ಅವರ ಮಲ್ಲೇಶ್ವರದ ನಿವಾಸದಿಂದ ಅಂತಿಮಯಾತ್ರೆ ಬಳಿಕ ಹರಿಶ್ಚಂದ್ರ ಘಾಟ್​ನಲ್ಲಿ ಸ್ಪಂದನಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪತಿ ವಿಜಯ್‌ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದರು. ಧಾರ್ಮಿಕ ವಿಧಿವಿಧಾನ ನೆರವೇರಿಸಿದ ಬಳಿಕ ಪುತ್ರ ಶೌರ್ಯ ಸ್ಪಂದನಾ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಕುಟುಂಬಸ್ಥರು, ಆಪ್ತರು, ಶಿವರಾಜ್ ಕುಮಾರ್ ದಂಪತಿ, ಅಭಿಷೇಕ್ ಅಂಬರೀಶ್ ಸೇರಿದಂತೆ ಸಾಕಷ್ಟು ಮಂದಿ ಗಣ್ಯರು ಅಂತಿಮ ವಿಧಿ ವಿಧಾನಗಳಲ್ಲಿ ಭಾಗಿಯಾದರು. ನಂತರ ವಿದ್ಯುತ್ ಚಿತಾಗಾರದ ಒಳಗೆ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿ, ಪತಿ ಹಾಗೂ ಮಗನಿಂದ ಅಂತ್ಯಕ್ರಿಯೆಗಳು ನಡೆದವು. ಸಂಜೆ 4.25ರ ಸುಮಾರಿಗೆ ಸ್ಪಂದನಾ ಪಾರ್ಥಿವ ಶರೀರಕ್ಕೆ ಕರ್ಪೂರ ಹಚ್ಚಿ, ವಿದ್ಯುತ್ ಸ್ಪರ್ಶ ಮಾಡಲಾಯಿತು.

ಅಂತಿಮ ಯಾತ್ರೆಯುದ್ಧಕ್ಕೂ ಜನಸಾಗರ

ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮಧ್ಯಾಹ್ನ 2.30ಕ್ಕೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಶುರುವಾಯಿತು. ಹರಿಶ್ಚಂದ್ರ ಘಾಟ್‌ನ ರುದ್ರಭೂಮಿ ತಲುಪುವ ಯಾತ್ರೆಯುದ್ದಕ್ಕೂ ಅಸಂಖ್ಯಾತ ಜನ ಅಂತಿಮ ಯಾತ್ರೆಯಲ್ಲಿ ಭಾಗಿಯಾದರು. ಇದಕ್ಕೂ ಮೊದಲು ಮೊದಲಿಗೆ ಸ್ಪಂದನಾ ಹುಟ್ಟಿ ಬೆಳೆದ ಕೋದಂಡರಾಮಪುರದ ನಿವಾಸದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕುಟುಂಬಸ್ಥರಿಂದ ಕಣ್ಣೀರಿನ ವಿದಾಯ

ಮಲ್ಲೇಶ್ವರದ ನಿವಾಸದಿಂದ ಕೋದಂಡರಾಮಪುರದ ಮುಖ್ಯ ರಸ್ತೆ, ಸಂಪಿಗೆ ರಸ್ತೆ ಮಾರ್ಗವಾಗಿ ಕೆ.ಸಿ. ಜನರಲ್ ಆಸ್ಪತ್ರೆ ಸರ್ಕಲ್ ತಲುಪಿದರು. ಅಲ್ಲಿಂದ ಶ್ರೀರಾಂಪುರ ಮೆಟ್ರೋ ಸ್ಟೇಷನ್‌ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಅಂತಿಮಯಾತ್ರೆಗೆ ಸಾಕ್ಷಿಯಾದರು. ಬಳಿಕ ರುದ್ರಭೂಮಿಯಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಆ ಮೂಲಕ ಕುಟುಂಬಸ್ಥರು ಕಣ್ಣೀರಿನ ವಿದಾಯ ಹೇಳಿದರು.

RELATED ARTICLES

Related Articles

TRENDING ARTICLES