ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಪರ ಮಾತನಾಡಿದ ಸಂಸದ ರಾಹುಲ್ ಗಾಂಧಿ ಲೋಕಸಭೆಯಿಂದ ನಿರ್ಗಮಿಸುವ ವೇಳೆ ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.
ಸಂಸತ್ ಸದಸ್ಯ ಸ್ಥಾನ ಮರುಸ್ಥಾಪನೆ ಬಳಿಕ ಕಲಾಪದಲ್ಲಿ ಭಾಗಿಯಾದ ರಾಹುಲ್ ಗಾಂಧಿ ಮೊದಲ ಬಾರಿ ಮಾತನಾಡಿದರು. ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪರ ಸುದೀರ್ಘವಾಗಿ ಮಾತನಾಡಿದರು.
ಫೈಲ್ಗಳನ್ನು ಕೆಳಗೆ ಬೀಳಿಸಿದ ರಾಗಾ
ರಾಹುಲ್ ಗಾಂಧಿ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತು ಆರಂಭಿಸಿದರು. ಸ್ಮೃತಿ ಇರಾನಿ ಮಾತು ಆರಂಭಿಸುತ್ತಿದ್ದಂತೆ ಲೋಕಸಭೆಯಿಂದ ನಿರ್ಗಮಿಸಲು ಮುಂದಾದ ರಾಹುಲ್ ಗಾಂಧಿ, ಹಾದಿ ಮಧ್ಯೆ ಕೆಲವು ಫೈಲ್ ಗಳನ್ನು ಕೆಳಗೆ ಬೀಳಿಸಿಕೊಂಡರು.
ಈ ವೇಳೆ ಅದನ್ನು ಎತ್ತಿಕೊಳ್ಳಲು ಮುಂದಾದಾಗ ಅಲ್ಲೇ ಕೂತಿದ್ದ ಬಿಜೆಪಿ ಸಂಸದರು, ರಾಹುಲ್ ಗಾಂಧಿ ನೋಡಿ ನಗಲು ಆರಂಭಿಸಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ, ಅವರಿಗೆ ಫ್ಲೈಯಿಂಗ್ ಕಿಸ್ ನೀಡಿ ಮುಂದೆ ನಡೆದರು. ಆ ಮೂಲಕ ರಾಹುಲ್ ಗಾಂಧಿ ನಡೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಸ್ತ್ರೀ ದ್ವೇಷಿಯಾಗಿರುವ ಪುರುಷ
ಈ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀ ದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷವು ಮಹಿಳೆಯರ ಬಗ್ಗೆ ಅವರ ಭಾವನೆ ಏನಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.