ಬೆಂಗಳೂರು : ಕಾಂಗ್ರೆಸ್ ಆಡಳಿತವೇ ಭ್ರಷ್ಟಾಚಾರದ ಅವತಾರ ಎತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಖುದ್ದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗುತ್ತಿಗೆದಾರರಲ್ಲಿ ಕಮಿಷನ್ ಕೇಳುತ್ತಿದ್ದಾರೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಮ್ಮ ಭ್ರಷ್ಟಾಚಾರದ ಕೃಷಿಗೆ ಅಧಿಕಾರಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂತಹ ಭ್ರಷ್ಟ ಎಟಿಎಂ ಸರ್ಕಾರದ ಸಚಿವರ ರಾಜಿನಾಮೆ ಯಾವಾಗ ಸಿದ್ಧರಾಮಯ್ಯ ಅವರೇ? ಎಂದು ಕಿಡಿಕಾರಿದ್ದಾರೆ.
ಅವಾಸ್ತವಿಕ ಗ್ಯಾರಂಟಿಗಳಿಂದಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರಿಗೆ ಬಿಲ್‌ಗಳನ್ನು ಪಾವತಿಸಲು ಕನಿಷ್ಠ 3 ವರ್ಷ ಬೇಕು ಎಂದು ಡಿಸಿಎಂ ಹೇಳುತ್ತಿರುವುದು ರಾಜ್ಯದ ಅಭಿವೃದ್ಧಿಗಳಿಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ತಿಲಾಂಜಲಿ ಇಡುವ ಸ್ಪಷ್ಟ ಸೂಚನೆಯಾಗಿದೆ ಎಂದು ಕುಟುಕಿದ್ದಾರೆ.
ಗುತ್ತಿಗೆದಾರರ ಜೀವ ಹಿಂಡುತ್ತಿದ್ದಾರೆ
ಒಂದೆಡೆ ಚಲುವರಾಯ ಸ್ವಾಮಿ ಅವರ ಭ್ರಷ್ಟಾಚಾರದ ಕೃಷಿಗೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಖುದ್ದು ಕಲೆಕ್ಷನ್‌ಗೆ ಇಳಿದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಗುತ್ತಿಗೆದಾರರ ಜೀವ ಹಿಂಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮಾತ್ರವಲ್ಲದೇ, ಕಮಿಷನ್ ಮತ್ತು ಕಲೆಕ್ಷನ್ ಕೂಡ ಬಣಕ್ಕೆ ಇಂತಿಷ್ಟು ಎಂದು ಫಿಕ್ಸ್ ಆಗಿರುವ ಹಾಗಿದೆ ಎಂದು ಚಾಟಿ ಬೀಸಿದ್ದಾರೆ.