ಬಾಗಲಕೋಟೆ : ಮಕ್ಕಳಿಲ್ಲ ಅಂತ ಪೋಷಕರು ಕಂಡ ಕಂಡ ದೇವರ ಮೊರೆ ಹೋಗುತ್ತಾರೆ. ತಾಯ್ತನಕ್ಕಾಗಿ ವ್ರತ, ಉಪವಾಸ ಮಾಡ್ತಾರೆ. ಆದ್ರೆ, ಇಲ್ಲೊಬ್ಬ ತಾಯಿಗೆ ಆಗ ತಾನೆ ಹುಟ್ಟಿದ ಮುದ್ದು ಕಂದನೇ ಬೇಡವಾಗಿದ್ದಾನೆ.
ಹೌದು, ನವಜಾತ ಗಂಡು ಶಿಶುವನ್ನು ಬಾಣಂತಿ ಹಾಗೂ ಪೋಷಕರು ಹೊಲದಲ್ಲಿ ಬಿಟ್ಟು ಹೋಗಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ದಾರಿ ಕೇಳಿದ್ದಕ್ಕೆ ಮಹಿಳೆ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆಗೆ ಯತ್ನ
ದಾರಿ ಮಧ್ಯೆ ಹೆರಿಗೆಯಾದ ಹಿನ್ನೆಲೆಯಲ್ಲಿ ಪೋಷಕರು ನವಜಾತ ಶಿಶುವನ್ನು ಹೊಲದಲ್ಲೇ ಬಿಸಾಕಿ ಪರಾರಿಯಾಗಲು ಯತ್ನಿಸಿದ್ದಾರೆ. ಸಂಗೊಂದಿ ಗ್ರಾಮದ ಬಾಣಂತಿ ಹಾಗೂ ಪೋಷಕರ ಈ ಅಮಾನವೀಯ ನಡೆಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಬಾಣಂತಿ ಹಾಗೂ ಸಹೋದರನಿಗೆ ಸ್ಥಳೀಯರು ಕಪಾಳಮೋಕ್ಷ ಮಾಡಿ ಬುದ್ದಿಮಾತು ಹೇಳಿದ್ದಾರೆ. ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ಥಳಿಯರು ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಬಾಣಂತಿ ಹಾಗೂ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. 108 ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.