Monday, December 23, 2024

ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ : ಕೆ.ಎನ್ ರಾಜಣ್ಣ

ಶಿವಮೊಗ್ಗ : ಪ್ರತಿ ಸಹಕಾರ ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. ಆ ಮೂಲಕ ರೈತರ ಆರ್ಥಿಕ ಸದೃಢತೆಗೆ ಶ್ರಮಿಸಲಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ಇಲ್ಲಿನ ಸಾಗರದ ಆರ್ಯ ಈಡಿಗರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘದಲ್ಲಿ ರಾಜಕೀಯ ಪ್ರವೇಶ ಇರಬಾರದು. ರಾಜಕಾರಣ ಪ್ರವೇಶವಾದರೆ ಸಹಕಾರಿ ಸಂಸ್ಥೆ ಬೆಳೆವಣಿಗೆ ನಿರೀಕ್ಷಿತಮಟ್ಟದಲ್ಲಿ ಆಗುವುದಿಲ್ಲ. ಸಹಕಾರ ಕ್ಷೇತ್ರಕ್ಕೆ ಹೊಸ ರಕ್ತವನ್ನು ತರುವ ಕೆಲಸವಾಗಬೇಕು. ಯುವಜನರು ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿ ವಹಿಸುವ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದರು.

ಅಡಿಕೆ ಬೆಳೆ ಆರ್ಥಿಕ ಜೀವನಾಡಿ

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಡಿಕೆ ಬೆಳೆ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದೆ. ಅಡಿಕೆ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರವಿದೆ. ಅಡಿಕೆ ಕ್ಯಾನ್ಸರ್‌ ಕಾರಕ ಎನ್ನುವ ವರದಿ ಬೆಳೆಗಾರ ಸಮೂಹಕ್ಕೆ ಆತಂಕ ತಂದಿತ್ತು. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಅಡಿಕೆ ಟಾಸ್ಕ್ ಫೋರ್ಸ್ ಸ್ಥಾಪಿಸಿ, ಅಡಿಕೆ ಕುರಿತು ವರದಿ ಬಂದಿದೆ ಎಂದರು.

ಅಡಿಕೆ ಸಿಪ್ಪೆ, ಅಡಿಕೆ ಹಾಳೆ ಸದ್ಬಳಕೆ

ಅಡಿಕೆ ಕ್ಯಾನ್ಸರ್‌ ಕಾರಕವಲ್ಲ, ಬದಲಾಗಿ ಕ್ಯಾನ್ಸರ್ ನಿವಾರಣೆಗೆ ಪೂರಕ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿಕೆ ಮೇಲಿನ ಅಪವಾದವನ್ನು ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ. ಅಡಿಕೆಯ ಪರ್ಯಾಯ ಉಪಯೋಗದ ಬಗ್ಗೆ ಸಹ ಸಂಶೋಧನೆ ನಡೆಯುತ್ತಿದೆ. ಅಡಿಕೆ ಸಿಪ್ಪೆ, ಅಡಿಕೆ ಹಾಳೆಯನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಸ್ವಾಮಿರಾವ್ ಮತ್ತಿತರಿದ್ದರು.

RELATED ARTICLES

Related Articles

TRENDING ARTICLES