Monday, December 23, 2024

ಕುಮಾರಸ್ವಾಮಿ ಭಗ್ನ ಪ್ರೇಮಿ : ದಿನೇಶ್ ಗುಂಡೂರಾವ್

ಬೆಂಗಳೂರು : ಕನಸು ಭಗ್ನಗೊಂಡ ಕುಮಾರಸ್ವಾಮಿ, ಭಗ್ನ ಪ್ರೇಮಿಯಂತೆ ವ್ಯಗ್ರರಾಗಿದ್ದಾರೆ ಎಂದು ಆರೋಗ್ಯ ಸಚವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ವಿಚಾರ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕುಮಾರಸ್ವಾಮಿಯವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ‌. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಡುತ್ತಿರುವ ಕುಮಾರಸ್ವಾಮಿ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಂದು ಕುಟುಕಿದ್ದಾರೆ.

ಮತ್ತೊಮ್ಮೆ ಸಿಡಿ ತೋರಿಸುತ್ತಾರೆ

ಕುಮಾರಸ್ವಾಮಿಯವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಕುಮಾರಸ್ವಾಮಿಯವರು ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವರು ಯಾರು? ಎಂದು ಗುಡುಗಿದ್ದಾರೆ.

ಕಿಂಗ್ ಮೇಕರ್ಕನಸು ನುಚ್ಚುನೂರು

ಕುಮಾರಸ್ವಾಮಿಯವರು ಚುನಾವಣೆಗೂ ಮುನ್ನ ‘ಕಿಂಗ್ ಮೇಕರ್’ ಆಗುವ ಕನಸು ಕಂಡಿದ್ದರು. ಆದರೆ, ಜನರು ಚುನಾವಣೆಯಲ್ಲಿ ಕುಮಾರಸ್ವಾಮಿ ‘ಕಿಂಗ್ ಮೇಕರ್’ ಕನಸನ್ನು ನುಚ್ಚುನೂರು ಮಾಡಿದರು. ಕನಸು ಭಗ್ನಗೊಂಡ ಕುಮಾರಸ್ವಾಮಿ, ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ, ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES