ಬೆಂಗಳೂರು : ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ತಮಿಳುನಾಡು ಕರ್ನಾಟಕದ ವಿರುದ್ಧ ಕ್ಯಾತೆ ತೆಗೆದಿದೆ. ಮೂರು ತಿಂಗಳ ಬಾಕಿ ನೀರನ್ನು ಪಡೆಯಲು ಮಾತುಕತೆಗೆ ಮುಂದಾಗಿದೆ.
ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ (AIADMK) ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಮಾತುಕತೆ ನಡೆಸಿ ರಾಜ್ಯಕ್ಕೆ ನೀಡಬೇಕಾದ 86.380 ಟಿಎಂಸಿ ಕಾವೇರಿ ನೀರನ್ನು ಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರಸ್ತುತ ಕರ್ನಾಟಕದ ಜಲಾಶಯಗಳಲ್ಲಿ ಶೇ.80ರಷ್ಟು ನೀರಿನ ಸಂಗ್ರಹವಿದೆ. ಸ್ಟಾಲಿನ್ ಅವರು ಬೆಂಗಳೂರಿಗೆ ಭೇಟಿ ನೀಡಿ ತಮ್ಮ ಮೈತ್ರಿಕೂಟದ ಭಾಗವಾಗಿರುವ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಬೇಕು. ಜೂನ್, ಜುಲೈ ಮತ್ತು ಈ ಆಗಸ್ಟ್ ತಿಂಗಳ ಬಾಕಿ ಇರುವ 86.360 ಟಿಎಂಸಿ ನೀರನ್ನು ಪಡೆದು, 3.5 ಲಕ್ಷ ಎಕರೆಯಲ್ಲಿ ಬೆಳೆದಿರುವ ಭತ್ತದ ಬೆಳೆಗೆ ನೆರವಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡಿನ ರೈತರಿಗೆ ಸಮಸ್ಯೆ
ಕರ್ನಾಟಕ ತಮಿಳುನಾಡಿನ ರೈತರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಕಾವೇರಿ ನೀರು ಪಡೆಯಬೇಕು ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಹೇಳಿದ್ದಾರೆ.