ರಾಯಚೂರು : ಅಕ್ರಮವಾಗಿ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ದಂಧೆ ಬೇಧಿಸಿ, ಐವರು ಆರೋಪಿಗಳನ್ನು ರಾಯಚೂರು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಹಾರ ಮೂಲದ ಸಂದೀಪ್ ಪಾಂಡೆ ಹಾಗೂ ರಾಯಚೂರು ನಗರದ ವಾಜಿದ್ ಬಂಧಿತ ಕಿಂಗ್ಪಿನ್ಗಳು. ಅದನ್ನು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದ ರತನೇಶ್, ಮಗ ಕುಂದನ್ ಕುಮಾರ್ ಹಾಗೂ ಕೃಷ್ಣಾ ರೆಡ್ಡಿಯನ್ನ ಬಂಧಿಸಲಾಗಿದೆ.
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಮಾದಕ ವಸ್ತು ಮಿಶ್ರಿತ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ ರಾಯಚೂರು ಅಬಕಾರಿ ಅಧಿಕಾರಿಗಳು ಗಾಂಜಾ ಚಾಕೋಲೆಟ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಎಚ್ಚೆತ್ತುಕೊಂಡ ಅಬಕಾರಿ ಅಧಿಕಾರಿಗಳು ಹಾಗೂ ರಾಯಚೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 8 ಕಡೆ ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದ ಲಿಂಕ್ಗಳನ್ನು ಬೇಧಿಸಿದ್ದಾರೆ.
ಐವರು ಆರೋಪಿಗಳು ಲಾಕ್
ಕಿರಾಣಿ ಅಂಗಡಿಗಳು, ಪಾನ್ ಶಾಫ್ಗಳಲ್ಲೇ ಇವರು ಈ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ನು ಮೊದಲ ದಾಳಿ ಬೆನ್ನಲ್ಲೇ ಕಾರ್ಯಸನ್ನದ್ಧರಾದ ಪೊಲೀಸರು ರಾಯಚೂರು ನಗರ, ಯರಮರಸ್, ಚಿಕ್ಕಸುಗೂರು, ಇಂಡಸ್ಟ್ರಿಯಲ್ ಏರಿಯಾ ಸೇರಿ ಎಂಟು ಕಡೆ ದಾಳಿ ನಡೆಸಿ, ನಾಲ್ಕು ಕಡೆಗಳಲ್ಲಿ ಇಬ್ಬರು ಕಿಂಗ್ಪಿನ್ಗಳು ಸೇರಿ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.