ಬೀದರ್ : ಲಂಚ ಸ್ವೀಕರಿಸುತ್ತಿದ್ದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಶೆಟ್ಟಿ ಎಂಬುವವರ ಮಗನಿಗೆ ವಸತಿ ಶಾಲೆಗೆ ಪ್ರವೇಶ ಕೊಡಲು ಶಂಕರ್ ಅವರು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ನಾಗಶೆಟ್ಟಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ಓಲೇಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಂಕರ್ ಅವರನ್ನು ರೆಡ್ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಬಿಟಿಡಿಎ ಕಚೇರಿಗೆ ‘ಲೋಕಾ’ ಭೇಟಿ
ಬಾಗಲಕೋಟೆಯ ನವನಗರದಲ್ಲಿರುವ ಬಿಟಿಡಿಎ(BTDA) ಕಚೇರಿಯಲ್ಲಿ ಸಂತ್ರಸ್ತರ ಕೆಲಸ ವಿಳಂಬ ಹಿನ್ನೆಲೆ ಬಿಟಿಡಿಎ(BTDA)ಕಚೇರಿಗೆ ಲೋಕಾಯುಕ್ತ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಪುಷ್ಪಲತಾ ನೇತೃತ್ವದ ಲೋಕಾಯುಕ್ತ ತಂಡದಿಂದ ಪರಿಶೀಲನೆ ನಡೆಸಲಾಗಿದೆ.
ಲೋಕಾಯುಕ್ತ ತಂಡ ಬಿಟಿಡಿಎ(BTDA) ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಪುಷ್ಪಲತಾ.ಎನ್ ನೇತೃತ್ವದಲ್ಲಿ 7 ಜನರ ತಂಡ ಭೇಟಿ ನೀಡಿದೆ. ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಮತ್ತು ತಂಡ ಬಾಕಿ ಉಳಿಸಿಕೊಂಡ ಕಡತಗಳ ಬಗ್ಗೆ ವಿಚಾರಣೆ ಮುಂದುವರಿಸಿದ್ದಾರೆ.