Monday, December 23, 2024

ರಾಜ್ಯ ಸರ್ಕಾರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಕುಟುಂಬದಿಂದ ಬಹಿರಂಗ ಪತ್ರ

ದಕ್ಷಿಣ ಕನ್ನಡ : ಹನ್ನೊಂದು (11) ವರ್ಷಗಳ ಹಿಂದೆ ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ್ದ ಸೌಜನ್ಯಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯಾದ್ಯಂತ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವಲ್ಲೇ ಧರ್ಮಸ್ಥಳ ಕ್ಷೇತ್ರದ ವತಿಯಿಂದಲೂ ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತಲಾಗಿದೆ.

ಸಿಐಡಿ, ಸಿಬಿಐ ತನಿಖೆಯ ಬಳಿಕವೂ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನೈಜ ಆರೋಪಿ ಬಂಧನ ಆಗದಿರುವುದು ಆಕ್ರೋಶದ ಅಲೆ ಎಬ್ಬಿಸಿದೆ. ಒಂದೆಡೆ ಸಾರ್ವಜನಿಕ ವಲಯದಲ್ಲಿ ಪ್ರತಿಭಟನೆ, ಆಕ್ರೋಶ ಕೇಳಿಬರುತ್ತಿದ್ದರೆ, ಧರ್ಮಸ್ಥಳದಲ್ಲಿ ಗ್ರಾಮದ ನಾಗರಿಕರು ಮತ್ತು ಕ್ಷೇತ್ರದ ವತಿಯಿಂದಲೂ ಪ್ರಕರಣದ ನೈಜ ಆರೋಪಿಗಳ ಬಂಧನಕ್ಕಾಗಿ ಆಗ್ರಹ ಕೇಳಿಬಂದಿದೆ. ಮೊನ್ನೆಯಷ್ಟೇ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಮತ್ತು ಮಂಜುನಾಥ ಸ್ವಾಮಿಯ ಮುಂದೆ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಸ್ಥಳೀಯರು ದೇವರಿಗೆ ಮೊರೆ ಇಟ್ಟಿದ್ದಾರೆ.

ಇದರ ಬೆನ್ನಲ್ಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ರಿಕಾ ಹೇಳಿಕೆ ನೀಡಿದ್ದು, ನೈಜ ಆರೋಪಿಗಳ ಬಂಧನಕ್ಕಾಗಿ ಮರು ತನಿಖೆಗೆ ಒತ್ತಾಯ ಮಾಡಿದ್ದಾರೆ. ಅಲ್ಲದೇ, ಕ್ಷೇತ್ರದ ಬಗ್ಗೆ ಅಪಪ್ರಚಾರ, ವದಂತಿಗಳಿಗೆ ಭಕ್ತರು ಮತ್ತು ಸಾರ್ವಜನಿಕರು ಗೊಂದಲಕ್ಕೀಡಾಬೇಡಿ ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಸೌಜನ್ಯಾ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣದ ಮರು ತನಿಖೆಗೆ ಒತ್ತಾಯ ಮಾಡಿದ್ದರು. ಆದರೆ, ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಪ್ರಕರಣದ ಕುರಿತ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ. ಇದಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗೌಡ ಒಕ್ಕಲಿಗರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಸಾವಿರಾರು ಸಾರ್ವಜನಿಕರು ಮೆರವಣಿಗೆ ನಡೆಸಿ ಮರು ತನಿಖೆಗೆ ಒತ್ತಾಯಿಸಿದ್ದಾರೆ. ನಾವು ಯಾವುದೇ ವ್ಯಕ್ತಿ, ಕ್ಷೇತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಬದಲಿಗೆ, ಪ್ರಕರಣದಲ್ಲಿ ನ್ಯಾಯ ಒದಗಿಸಿ, ನೈಜ ಆರೋಪಿಗಳನ್ನು ಪತ್ತೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ.

ಇದೇ ವೇಳೆ, ಸೌಜನ್ಯಾ ತಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ರಾಜ್ಯ ಸರಕಾರ ಒಟ್ಟು ಘಟನೆಯನ್ನು ಮರು ತನಿಖೆಗೆ ಆದೇಶ ಮಾಡಬೇಕು. ಅದಕ್ಕಾಗಿ ವಿಶೇಷ ತನಿಖಾ ತಂಡ ನೇಮಕ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

RELATED ARTICLES

Related Articles

TRENDING ARTICLES